ಮಧ್ಯಪ್ರದೇಶ: ಸರ್ಕಾರ ಬಡವರಿಗಾಗಿ ರೂಪಿಸುವ ಯೋಜನೆಗಳು ಜನರನ್ನು ತಲುಪೋದಕ್ಕಿಂತ ಬೇರೆಯವರ ಕೈ ಸೇರೋದೇ ಜಾಸ್ತಿ.ಜನರಿಗೆ ಉದ್ಯೋಗ ನೀಡೋ ಕಾರಣಕ್ಕೆ ಜಾರಿಗೆ ಬಂದ ನರೇಗಾ ಯೋಜನೆಯಲ್ಲೂ ಇಂತಹುದೇ ಅವಾಂತರ ನಡೆದಿದ್ದು, ಕಾರ್ಮಿಕರ ಸೋಗಿನಲ್ಲಿ ನಟಿಮಣಿಯರ ಹೆಸರು ಹಾಕಿ ಹಣ ದೋಚಲಾಗುತ್ತಿದೆ.

ಮಧ್ಯಪ್ರದೇಶದ ಜಿಲ್ಲೆಯೊಂದರ ನರೇಗಾ ಫಲಾನುಭವಿಗಳ ಲಿಸ್ಟ್ ನಲ್ಲಿ ಕೂಲಿ ಕಾರ್ಮಿಕರ ಸಾಲಿನಲ್ಲಿ ದೀಪಿಕಾ ಪಡುಕೋಣೆ ಹಾಗೂ ಜಾಕ್ವಲಿನ ಫರ್ನಾಂಡಿಸ್ ಹೆಸರು ಇದೆ. ಅಷ್ಟೇ ಅಲ್ಲ ಅವರ ಖಾತೆಯನ್ನು ನರೇಗಾ ಯೋಜನೆಗೆ ಜೋಡಿಸಲಾಗಿದೆ. ದಾಖಲೆಗಳ ಪ್ರಕಾರ ಅವರು ನಿಗದಿತ ಕೂಲಿ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ಸರ್ಕಾರದಿಂದ ಅವರಿಗೆ ಕೂಲಿಯ ಸಂಬಳವೂ ಸಿಕ್ಕಿದೆ.

ತಮ್ಮ ಖಾತೆಗೆ ಬಿದ್ದ ಕೂಲಿಯ ಸಂಬಳವನ್ನು ದೀಪಿಕಾ ಹಾಗೂ ಜಾಕ್ವಲಿನ್ ಫರ್ನಾಂಡಿಸ್ ಡ್ರಾ ಮಾಡಿ ಬಳಕೆ ಮಾಡಿದ್ದಾರೆ. ಮಧ್ಯ ಪ್ರದೇಶದ ಕಾರ್ಗೂನ್ ಜಿಲ್ಲೆಯಲ್ಲಿ ಈ ನಟಿಮಣಿಯರು ಕೂಲಿ ಮಾಡಿದ್ದಾರೆ. ಈ ಜಿಲ್ಲೆಗಳಲ್ಲಿ ನರೇಗಾ ಯೋಜನೆಯಡಿ ನಕಲಿ ಕೂಲಿಯಾಳುಗಳನ್ನು ಸೃಷ್ಟಿಸಲಾಗುತ್ತಿದ್ದು, ಇದಕ್ಕೆ ಕೂಲಿಗಳಲ್ಲದವರ ಆಧಾರ ಕಾರ್ಡ್ ಲಿಂಕ್ ಮಾಡಲಾಗುತ್ತದೆ.

ಜೊತೆಗೆ ಹೀಗೆ ಸಿನಿಮಾ ನಟಿಯರ ಪೋಟೋ ಅಂಟಿಸಿ ಜಾಬ್ ಕಾರ್ಡ್ ಸಿದ್ಧಪಡಿಸಿಕೊಂಡು ಹಣ ಲಪಟಾಯಿಸಲಾಗುತ್ತದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು ಸರ್ಕಾರಿ ಯೋಜನೆಯ ದುರ್ಬಳಕೆ ಮಾಡಲು ಹೀಗೆಲ್ಲ ಪ್ಲ್ಯಾನ್ ಮಾಡಲಾಗುತ್ತದೆ.

ಜುಲೈ ತಿಂಗಳಿನಲ್ಲಿ ಹೀಗೆ ದೀಪಿಕಾ ಪಡುಕೋಣೆ ಹಾಗೂ ಜಾಕ್ವಲಿನ ಹೆಸರಿನ ಖಾತೆಯಿಂದ ಹಣ ಡ್ರಾ ಆಗಿರೋದು ಹಾಗೂ ಜಾಬ್ ಕಾರ್ಡ್ ನಲ್ಲಿ ಅವರ ಪೋಟೋ ಇರೋದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಅಧಿಕಾರಿಗಳನ್ನು ಸೇರಿದಂತೆ ಘಟನೆಗೆ ಕಾರಣರಾದವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.