ರಾಜ್ಯ ಸರಕಾರದ ಆದೇಶಕ್ಕೆ ಡೋಂಟ್ ಕೇರ್ : ಈ ಖಾಸಗಿ ಶಾಲೆಯ ಆದೇಶಕ್ಕೆ ಪೋಷಕರು ಕಂಗಾಲು..!

ಬೆಂಗಳೂರು : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 9 ಮತ್ತು 10ನೇ ತರಗತಿಗಳನ್ನು ಆರಂಭಿಸಿದೆ. ಉಳಿದ ವಿದ್ಯಾರ್ಥಿಗಳಿಗೆ ವಿದ್ಯಾಗಮ ಹಾಗೂ ಆನ್ ಲೈನ್ ಮೂಲಕ ಪಾಠ ಬೋಧನೆಗೆ ಸೂಚಿಸಿದೆ. ಆದರೆ ಈ ಶಾಲೆ ಸರಕಾರದ ನಿಯಮಗಳನ್ನೇ ಗಾಳಿಗೆ ತೂರಿದ್ದು, 5 ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ತರಗತಿಗೆ ಹಾಜರಾಗುವಂತೆ ಆದೇಶ ಹೊರಡಿಸಿದೆ.

ಬೆಂಗಳೂರಿನ ಟಿ.ಆರ್.ನಗರದಲ್ಲಿರುವ ಎಸ್ಎಸ್ಎಂ ಪಬ್ಲಿಕ್ ಸ್ಕೂಲ್ ನಲ್ಲಿ ಡಿಸೆಂಬರ್ 29ರಂದು ಪೋಷಕರಿಗೆ ಆದೇಶ ಹೊರಡಿಸಿದೆ. ಶಿಕ್ಷಣ ಸಚಿವರ ಸೂಚನೆಯ ಹಿನ್ನೆಲೆಯಲ್ಲಿ 5 ರಿಂದ 10ನೇ ತರಗತಿಗಳನ್ನು ಫೆಬ್ರವರಿ 1ರಿಂದ ಆರಂಭಿಸಲಾಗುತ್ತಿದ್ದು, 5 ರಿಂದ 7ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಬೆಳಗ್ಗೆ 9 ರಿಂದ ಮಧ್ಯಾಹ್ನ 12.50ರ ತನಕ ಹಾಗೂ 8 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಬೆಳಗ್ಗೆ 9 ರಿಂದ ಮಧ್ಯಾಹ್ನ 3ರ ವರೆಗೆ ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದೆ.

ರಾಜ್ಯ ಸರಕಾರ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಶಿಕ್ಷಣ ನೀಡಲು ಸೂಚನೆಯನ್ನು ನೀಡಿದೆ. ಆದರೆ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಕೊರೊನಾ ನಿಯಮ ಗಳನ್ನು ಅಳವಡಿಸಿಕೊಂಡು ತರಗತಿಗಳಿಗೆ ಹಾಜರಾಗುವಂತೆಯೂ ಹೇಳಿದೆ. ಅಲ್ಲದೇ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಕಡ್ಡಾಯವಾಗಿ ಅನುಮತಿ ಪತ್ರ ತರಬೇಕೆಂದು ಕೂಡ ನಿರ್ದೇಶನವನ್ನು ನೀಡಿದೆ.

ಆದರೆ ಎಸ್ಎಸ್ಎಂ ಪಬ್ಲಿಕ್ ಸ್ಕೂಲ್ 9 ಮತ್ತು 10ನೇ ತರಗತಿಯನ್ನು ಆರಂಭಿಸಿದೆ. ಇದರ ಜೊತೆಗೆ ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ 5 ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿ ಗಳಿಗೆ ಆನ್ ಲೈನ್ ತರಗತಿಗಳನ್ನು ಕಡಿತಗೊಳಿಸಿದ್ದು, ಕಡ್ಡಾಯವಾಗಿ ತರಗತಿಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದೆ. ಇದರಿಂದಾಗಿ ಪೋಷಕರು ಹಾಗೂ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಕೆಲ ಪೋಷಕರು ಅನಿವಾರ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ.

ಶಾಲೆಯ ಆಡಳಿತ ಮಂಡಳಿ ಈಗಾಗಲೇ ಪೂರ್ಣ ಶುಲ್ಕವನ್ನು ವಸೂಲಿ ಮಾಡಿದೆ. ಶುಲ್ಕ ಪಾವತಿಗೂ ಮುನ್ನ ಆನ್ ಲೈನ್ ಮೂಲಕವೇ ವಿದ್ಯಾರ್ಥಿಗಳಿಗೆ ಪಾಠವನ್ನು ಬೋಧಿಸುತ್ತಿದ್ದ ಶಾಲೆ, ಇದೀಗ ಪೋಷಕರು ಶುಲ್ಕ ಪಾವತಿ ಮಾಡುತ್ತಿದ್ದಂತೆಯೇ ತಾಂತ್ರಿಕ ದೋಷದ ಕುಂಟು ನೆಪವೊಡ್ಡಿ ಆನ್ ಲೈನ್ ತರಗತಿಯನ್ನು ಕಡಿತಗೊಳಿಸಿದೆ. ಅಲ್ಲದೇ ಶಿಕ್ಷಣ ಸಚಿವರ ಸೂಚನೆಯಂತೆ ವಿದ್ಯಾರ್ಥಿಗಳು ಕಡ್ಡಾಯವಾಗಿ ತರಗತಿಗೆ ಹಾಜರಾಗುವಂತೆ ಸೂಚಿಸಿರುವುದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಅಂತಾ ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನಾದ್ರೂ ಶಿಕ್ಷಣ ಸಚಿವರು ಇತ್ತ ಗಮನಹರಿಸಬೇಕಾದ ಅಗತ್ಯವಿದೆ.

Comments are closed.