ಬೆಂಗಳೂರು : ಕೊರೊನಾ ಮಹಾಮಾರಿಯ ಅಬ್ಬರ ಜೋರಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಜನ ಮಾಸ್ಕ್, ಗ್ಲೌಸ್ ಗಳ ಮೊರೆ ಹೋಗ್ತಿದ್ದಾರೆ. ಆದರೆ ಕೆಲವರು ಮಾಸ್ಕ್ ಮಾರುವುದನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಮಾತ್ರವಲ್ಲ ನಕಲಿ ಮಾಸ್ಕ್ ಗಳನ್ನು ಮಾರಾಟ ಮಾಡೋ ಮೂಲಕ ಜನರಿಗೆ ವಂಚಿಸುತ್ತಿದ್ದಾರೆ.

ಕೊರೊನಾ ವೈರಸ್ ಹರಡುತ್ತಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಆರೋಪಿಗಳು ನಕಲಿ ಎನ್ 95 ಮಾಸ್ಕ್ ಗಳನ್ನು ಕಂಪನಿಯ ಮಾಸ್ಕ್ ಗಳೆಂದು ನಂಬಿಸಿ ಮಾರಾಟ ಮಾಡಿ ಮೋಸ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ.

ಬೆಂಗಳೂರಿನ ಕಲ್ಯಾಣನಗರ ಬಳಿಯ ZIS ENGINEERING,BNC BANGALORE DIABETIC CENTER ಗೆ ಸೇರಿದ ಗೋಡೌನ್ ನಲ್ಲಿ 12 ಸಾವಿರಕ್ಕೂ ಹೆಚ್ಚು ನಕಲಿ ಎನ್-95 ಮಾಸ್ಕ್ ಗಳನ್ನು ಇಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಆರ್ಥಿಕ ಅಪರಾಧ ದಳದ ಎಸಿಪಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಗಳು ಹಾಗೂ ಸಿಬ್ಬಂಧಿ ದಾಳಿ ನಡೆಸಿದ್ದು ಮಾಸ್ಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 20 ಲಕ್ಷ ಅಂತ ಅಂದಾಜು ಮಾಡಲಾಗಿದೆ.

ಪೊಲೀಸರ ತನಿಖೆ ವೇಳೆ ಆರೋಪಿಗಳು ಈಗಾಗಲೇ ಸುಮಾರು 70 ಸಾವಿರ ನಕಲಿ ಮಾಸ್ಕ್ ಗಳನ್ನು ಮಾರಾಟ ಮಾಡಿ 1.05 ಕೋಟಿ ಹಣಗಳಿಸಿರೋದು ಗೊತ್ತಾಗಿದೆ. ಆರೋಪಿಗಳ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರಿನ ಕೆಲವು ಮೆಡಿಕಲ್ ಶಾಪ್ ಮಾಲೀಕರು ಸಹ ಇವರೊಂದಿಗೆ ಕೈ ಜೋಡಿಸಿರುವ ಶಂಕೆ ಇದ್ದು , ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..