ಬೆಂಗಳೂರು : ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಒಂದೊಂದೆ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಸರಕಾರಿ ಅಧಿಕಾರಿಯೋರ್ವ ಬಾಗಿಯಾಗಿರೋದು ಬಯಲಾಗಿದೆ.

ಬೆಂಗಳೂರಿನ ಉಳ್ಳಾಲದಲ್ಲಿರುವ ಅಪಾರ್ಟ್ ಮೆಂಟ್ ವೊಂದರ ಮೇಲೆ ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿ ಸಿಸಿಬಿ ಪೊಲೀಸರು ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಬಯಲು ಮಾಡಿದ್ದರು. ಪ್ಲ್ಯಾಟ್ ನಲ್ಲಿ ಆರೋಪಿಗಳಾದ ರಾಚಪ್ಪ ಹಾಗೂ ಚಂದ್ರು ಸೇರಿದಂತೆ ಪ್ರಶ್ನೆ ಪತ್ರಿಕೆ ಕೊಳ್ಳಲು ಬಂದಿದ್ದ 5 ಸೇರಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಪೈಕಿ ಚಂದ್ರು ಸರಕಾರಿ ಅಧಿಕಾರಿಯಾಗಿದ್ದಾನೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಇನ್ ಸ್ಪೆಕ್ಟರ್ ಆಗಿರುವ ಚಂದ್ರು ಕೋರಮಂಗಲದಲ್ಲಿ ಕೆಲಸ ಮಾಡ್ತಿದ್ದ. ಎಫ್ ಡಿಎ ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡುವ ಜಾಲದಲ್ಲಿ ಈತ ಎರಡನೇ ಸ್ತರದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಪ್ರತೀ ಪ್ರಶ್ನೆ ಪತ್ರಿಕೆಗೆ ತಲಾ 10 ಲಕ್ಷ ರೂಪಾಯಿ ಹಣವನ್ನು ಪಡೆಯುತ್ತಿರೋದಾಗಿ ವಿಚಾರಣೆಯ ವೇಳೆಯಲ್ಲಿ ಬಾಯ್ಬಿಟ್ಟಿದ್ದಾನೆ.

ಎಫ್ ಡಿಎ ಪರೀಕ್ಷಾ ಕೇಂದ್ರದಿಂದಲೇ ಪ್ರಶ್ನೆ ಪತ್ರಿಕೆಯನ್ನು ತೆಗೆದಿರುವ ಆರೋಪಿಗಳು ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೂ ಸಪ್ಲೈ ಮಾಡಿದ್ದಾರೆ. ನಿನ್ನೆಯೂ ಕೂಡ ತನ್ನದೇ ಪ್ಲ್ಯಾಟ್ ನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೆ ಮಾಡುವ ವೇಳೆಯಲ್ಲಿಯೇ ಚಂದ್ರು ಸಿಸಿಬಿ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಪ್ರಕರಣದಲ್ಲಿ ಸರಕಾರಿ ಅಧಿಕಾರಿ ಚಂದ್ರ ಬಂಧನದ ಬೆನ್ನಲ್ಲೇ ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆಯಿದೆ. ಚಂದ್ರು 2ನೇ ಹಂತದಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಮೊದಲ ಹಂತದಲ್ಲಿ ಕಾರ್ಯನಿರ್ವಹಿಸಿದವರ ಕುರಿತು ಪೊಲೀಸರು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ಪ್ರಶ್ನೆ ನೀಡದೇ ಉತ್ತರವನ್ನಷ್ಟೇ ನೀಡ್ತಿದ್ದ ವಂಚಕರು ..!
ಎಫ್ ಡಿಎ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕರು ಖತರ್ ನಾಕ್ ಪ್ಲ್ಯಾನ್ ಮಾಡಿಕೊಂಡಿದ್ದರು. ಪ್ರಶ್ನೆ ಪತ್ರಿಕೆಯನ್ನೇ ಮಾರಾಟ ಮಾಡಿದ್ರೆ ಸಮಸ್ಯೆ ಆಗುತ್ತೆ ಅನ್ನೋ ಕಾರಣಕ್ಕೆ ಪ್ರಶ್ನೆ ಪತ್ರಿಕೆಯ ಬದಲು ಕೇವಲ ಪ್ರಶ್ನೆಯ ಉತ್ತರವನ್ನಷ್ಟೇ ನೀಡುತ್ತಿದ್ದರು. ಪ್ರಶ್ನೆ ಸಿಗುತ್ತಿದ್ದಂತೆಯೇ ಅದಕ್ಕೆ ಸಂಬಂಧಪಟ್ಟ ಉತ್ತರವನ್ನು ಸಿದ್ದ ಪಡಿಸಿ ಅಭ್ಯರ್ಥಿಗಳಿಗೆ ಮಾರಾಟ ಮಾಡಿದ್ದಾರೆನ್ನುವ ಅಂಶ ಇದೀಗ ಸಿಸಿಬಿ ತನಿಖೆಯಿಂದ ಬಯಲಾಗಿದೆ.