ಪಶ್ಚಿಮಬಂಗಾಳ: ಕೊರೋನಾ ನಿಯಂತ್ರಣ ಹಾಗೂ ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಪಟಾಕಿ ಹಚ್ಚುವುದನ್ನು ನಿಷೇಧಿಸಲಾಗಿದೆ. ಆದರೆ ಈ ವಿಚಾರದಲ್ಲಿ ಪಶ್ಚಿಮಬಂಗಾಳ ಇನ್ನು ಒಂದು ಹೆಜ್ಜೆ ಮುಂದೇ ಹೋಗಿದ್ದು ನಿಯಮ ಮೀರಿ ಪಟಾಕಿ ಹಚ್ಚೋರನ್ನು ಪತ್ತೆ ಹಚ್ಚಲು ಜಿಪಿಎಸ್ ಬಳಸಲು ನಿರ್ಧರಿಸಿದೆ.

ಕಾಳಿ ಪೂಜೆ,ದೀಪಾವಳಿ,ಧನ್ ತೇರಸ್ ಸೇರಿದಂತೆ ವಿವಿಧ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಸಿಡಿಸುವವರನ್ನು ಪತ್ತೆ ಹಚ್ಚಲು ಪಶ್ಚಿಮಬಂಗಾಳ ಪೊಲೀಸರು ಜಿಪಿಎಸ್ ಬಳಸುತ್ತಿದ್ದಾರೆ.
ಜಿಪಿಎಸ್ ಆಧಾರಿತ ಸೌಂಡ್ ಮಾನಿಟರಿಂಗ್ ಸಾಧನವನ್ನು ಪಶ್ಚಿಮಬಂಗಾಳದ ಪೊಲೀಸರಿಗೆ ನೀಡಲಾಗಿದ್ದು, ಇದನ್ನು ಬಳಸಿ ಪೊಲೀಸರು ಪಟಾಕಿ ಸಿಡಿಸುವ ಸ್ಥಳ, ಪಟಾಕಿಯ ತೀವ್ರತೆ ಹಾಗೂ ಮಾಲಿನ್ಯದ ಪ್ರಮಾಣ ಅಳೆಯಬಹುದಾಗಿದೆ.

ಪಶ್ಚಿಮಬಂಗಾಳದ ಮಾಲಿನ್ಯ ನಿಯಂತ್ರಣ ಮಂಡಳಿಯೂ ಇಂತಹದೊಂದು ಯಂತ್ರವನ್ನು ರಾಜ್ಯದ ಸಾವಿರಕ್ಕೂ ಹೆಚ್ಚು ಪೊಲೀಸ್ ಠಾಣೆಗೆ ವಿತರಿಸಿದೆ.
ಈ ಯಂತ್ರ ನಡುವೆ ನಿಷೇಧಿತ ಪಟಾಕಿ ಸಿಡಿಸಿದ ಸ್ಥಳ,ಸಮಯ ಹಾಗೂ ದಿನಾಂಕ ಹಾಗೂ ಪಟಾಕಿಯ ತೀವ್ರತೆಯನ್ನು ಅಳೆಯುತ್ತದೆ. ಅಲ್ಲದೇ ಈ ಯಂತ್ರಕ್ಕೆ ಪ್ರಿಂಟರ್ ಅಳವಡಿಸಿದಲ್ಲಿ ವರದಿಯ ಪ್ರಿಂಟೌಟ್ ಕೂಡ ಪಡೆಯಬಹುದಾಗಿದೆ.
ಈ ಯಂತ್ರವನ್ನು ಹೇಗೆ ಬಳಕೆ ಮಾಡಬೇಕೆಂಬುದನ್ನು ಈಗಾಗಲೆ ಪಶ್ಚಿಮ ಬಂಗಾಳ ಪೊಲೀಸರಿಗೆ ತರಬೇತಿ ಸಹ ನೀಡಲಾಗಿದ್ದು, ಇದು ನಿಯಮ ಉಲ್ಲಂಘಿಸುವವರನ್ನು ಪತ್ತೆಹಚ್ಚಲು ನೆರವಾಗಲಿದೆ. ಈ ಪಟಾಕಿ ಶಬ್ದ ಹಾಗೂ ಮಾಹಿತಿ ತಿಳಿಯುವ ಜಿಪಿಎಸ್ ಯಂತ್ರವನ್ನು ಪಶ್ಚಿಮ ಬಂದಾಳದ ಐಟಿ ಇಲಾಕೆ ಕಳೆದ ವರ್ಷವೇ ಸಿದ್ಧಪಡಿಸಿದೆಯಂತೆ.