ಬೆಂಗಳೂರು : ಗಣೇಶ ಚತುರ್ಥಿ ಹಬ್ಬಕ್ಕೀಗ ಕೊರೊನಾ ಕರಿನೆರಳು ಬಿದ್ದಿದೆ. ಅಗಸ್ಟ್ 22ರಂದು ನಡೆಯಲಿರುವ ಗಣೇಶ ಚತುರ್ಥಿಯ ಅಂಗವಾಗಿ ಸಾರ್ವಜನಿಕವಾಗಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದಕ್ಕೆ ರಾಜ್ಯ ಸರಕಾರ ನಿಷೇಧ ಹೇರಿದೆ.
ದೇಶದಾದ್ಯಂತ ಗಣೇಶೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಆದ್ರೆ ಈ ಬಾರಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಬ್ರೇಕ್ ಬಿದ್ದಿದೆ. ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಗಣೇಶೋತ್ಸವ ಆಚರಣೆಯ ಕುರಿತು ಮಾರ್ಗಸೂಚಿಯೊಂದನ್ನು ಹೊರಡಿಸಿದೆ.

ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಗಣೇಶೋತ್ಸವ ಆಚರಣೆಯ ಕುರಿತು ಅನುಮತಿ ನೀಡುವ ಅಧಿಕಾರವನ್ನು ಆಯಾಯ ಜಿಲ್ಲಾಧಿಕಾರಿಗಳಿಗೆ ನೀಡಿದ್ದರು. ಆದ್ರೀಗ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿ, ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶವನ್ನು ನಿರಾಕರಿಸಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆ 2005ರಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಈ ಕೆಳಕಂಡ ಮಾರ್ಗಸೂಚಿಗಳನ್ನು ಮಹಾನಗರ ಪಾಲಿಕೆಗಳ ಆಯುಕ್ತರು, ಪೊಲೀಸ್ ಆಯುಕ್ತರು, ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇತರೆ ಇಲಾಖಾ ಮುಖ್ಯಸ್ಥರುಗಳು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸತಕ್ಕದ್ದು ಎಂಬುದಾಗಿ ಆದೇಶಿಸಿದ್ದಾರೆ.

ಈ ಬಾರಿ ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ದೇವಸ್ಥಾನದೊಳಗೆ ಅಥವಾ ತಮ್ಮ ಮನೆಗಳಲ್ಲಿಯೇ ಆಚರಿಸಬೇಕು. ಗಣೇಶೋತ್ಸವ ಹಬ್ಬವನ್ನು ಸಾರ್ವಜನಿಕ ಸ್ಥಳ (ಉದಾ-ರಸ್ತೆ, ಗಲ್ಲಿ, ಓಣಿ, ಮೈದಾನ ಇತ್ಯಾದಿ) ಗಳಲ್ಲಿ ಪ್ರತಿಷ್ಠಾಪನೆ ಮಾಡಬಾರದು. ಯಾವುದೇ ಕಾರಣಕ್ಕೂ ಸಾರ್ವಜನಿಕ ನದಿ, ಕೆರೆ, ಕೊಳ, ಬಾವಿ ಮತ್ತು ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡುವಂತಿಲ್ಲ.

ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭಗಳಲ್ಲಿ ಯಾವುದೇ ರೀತಿಯ ಮೆರವಣಿಗೆಯನ್ನು ಹೊರಡಿಸತಕ್ಕದ್ದಲ್ಲ, ಮಾಡತಕ್ಕದ್ದಲ್ಲ. ಇದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಅವರ ಮನೆ ಆವರಣದಲ್ಲಿಯೇ ವಿಸರ್ಜನೆ ಮಾಡಬೇಕೆಂದು ಕಟ್ಟಪ್ಪಣೆಯನ್ನು ಹೊರಡಿಸಿದ್ದಾರೆ.


