ಭಾರತದಲ್ಲಿಯೂ ಕೊರೊನಾ ಲಸಿಕೆ ಸಕ್ಸಸ್ : ದೇಶೀಯ ಲಸಿಕೆ ಕೊವಾಕ್ಸಿನ್​ ಸುರಕ್ಷಿತ !

0

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಲಸಿಕೆಗಾಗಿ ವಿಶ್ವದಾದ್ಯಂತ ಸಂಶೋಧನೆಗಳು ನಡೆಯುತ್ತಿದೆ. ರಷ್ಯಾದಲ್ಲಿ ಕೊರೊನಾ ಲಸಿಕೆ ಸಿದ್ದವಾಗಿದೆ ಎಂದು ಸುದ್ದಿ ಹೊರಬಿದ್ದ ಬೆನ್ನಲ್ಲೇ ಭಾರತ ಕೂಡ್ ಕೊರೊನಾ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟಿದೆ.

ದೇಶೀಯ ಕೊರೊನಾ ಲಸಿಕೆ ಮಾನವರ ಮೇಲೆ ಬಳಕೆಗೆ ಸುರಕ್ಷಿತ ಎಂಬುವುದು ದೃಢಪಟ್ಟಿದ್ದು, ದೇಶೀಯ ಕೊರೊನಾ ಲಸಿಕೆಗೆ ಆರಂಭಿಕ ಯಶಸ್ಸು ಸಿಕ್ಕಿದೆ. ಈ ಮೂಲಕ ಭಾರತವೂ ಮಹತ್ವದ ಯಶಸ್ಸು ಸಾಧಿಸಿದೆ.

ಹೈದರಾಬಾದ್​ನ ಭಾರತ್​ ಬಯೋಟೆಕ್​ ಈ ಕೊವಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ವೈರಾಲಜಿ ಈ ಕಾರ್ಯಕ್ಕೆ ಸಾಥ್​ ನೀಡಿವೆ. ಮುಂದಿನ ತಿಂಗಳು ಇದರ ಎರಡನೇ ಹಂತದ ಪರೀಕ್ಷೆ ನಡೆಸಲಿವೆ.

ಈ ನಡುವಲ್ಲೇ ದೇಶದ 12 ವೈದ್ಯಕೀಯ ಸಂಸ್ಥೆಗಳಲ್ಲಿ ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಕ್ಲಿನಿಕಲ್​ ಟ್ರಯಲ್​ ನಡೆಯುತ್ತಿದೆ. ಇದೀಗ ಮೊದಲ ಹಂತದ ಪರೀಕ್ಷೆಯ ಆರಂಭಿಕ ಫಲಿತಾಂಶಗಳು ಕೊವಾಕ್ಸಿನ್​ ಮಾನವರ ಬಳಕೆಗೆ ಸುರಕ್ಷಿತ ಎಂಬುದನ್ನು ತಿಳಿಸಿವೆ.

ಪ್ರಯೋಗಾರ್ಥಿಗಳಿಗೆ ಎರಡನೇ ಹಂತದ ಡೋಸ್​ ನೀಡಲಾಗುತ್ತಿದ್ದು, ಅವರ ದೇಹದಲ್ಲಿ ಉಂಟಾಗಿರಬಹುದಾದ ಪ್ರತಿರೋಧಕ ಶಕ್ತಿಯ ವಿವರವನ್ನು ತಿಳಿಯಲು ರಕ್ತದ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಈವರೆಗಿನ ಪರೀಕ್ಷೆಯಲ್ಲಿ ಲಸಿಕೆ ಸುರಕ್ಷಿತ ಎಂಬುದು ಗೊತ್ತಾಗಿದೆ. ಇದಾದ ಬಳಿಕ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದನ್ನು ತಿಳಿಯಬೇಕಿದೆ. ಇದಕ್ಕಾಗಿ ರಕ್ತದ ಮಾದರಿಯನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ಮೊದಲ ಹಂತದ ಪ್ರಯೋಗದಲ್ಲಿ ಒಟ್ಟು 375 ಜನರ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದೆ. ಎರಡನೇ ಹಂತದ ಪರೀಕ್ಷೆಯಲ್ಲಿ 1000ಕ್ಕೂ ಅಧಿಕ ಜನರ ಮೇಲೆ ಕ್ಲಿನಿಕಲ್​ ಟ್ರಯಲ್​ ನಡಸಲು ಉದ್ದೇಶಿಸಲಾಗಿದೆ. ಈ ಪರೀಕ್ಷೆ ಸೆಪ್ಟಂಬರ್​ ಶುರು ಆಗುವ ನಿರೀಕ್ಷೆ ಹೊಂದಲಾಗಿದೆ. ಪರೀಕ್ಷೆ ನಡೆಸಲಾಗುತ್ತಿರುವ 12 ಸಂಸ್ಥೆಗಳಲ್ಲಿ ಬೆಳಗಾವಿಯ ಜೀವನ್​ ರೇಖಾ ಆಸ್ಪತ್ರೆಯೂ ಸೇರಿದೆ.

ರೋಹ್ಟಕ್​ನ ವೈದ್ಯಕೀಯ ಸಂಸ್ಥೆಯಲ್ಲಿ ನಡೆಯುತ್ತಿರುವ ಕ್ಲಿನಿಕಲ್ ಟ್ರಯಲ್​ನ ಮುಖ್ಯ ಸಂಶೋಧನಾಧಿಕಾರಿಯಾಗಿರುವ ಡಾ. ಸವಿತಾ ವರ್ಮಾ, ಸಂಸ್ಥೆಯಿಂದ ಪ್ರಾಯೋಗಿಕವಾಗಿ ಲಸಿಕೆ ಪಡೆದವರಲ್ಲಿ ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ. ಲಸಿಕೆ ಮಾನವರ ಬಳಕೆಗೆ ಸುರಕ್ಷಿತ ಎಂಬುದನ್ನು ಇದು ತಿಳಿಸುತ್ತದೆ ಎಂದು ಹೇಳಿದ್ದಾರೆ.

Leave A Reply

Your email address will not be published.