ಉಡುಪಿ : ಕೊರೊನಾ ಮಹಾಮಾರಿಯಿಂದಾಗಿ ಜನತೆ ತತ್ತರಿಸಿದ್ದಾರೆ. ಆಸ್ಪತ್ರೆಗಳಲ್ಲಿ ಸಾಮಾನ್ಯ ಚಿಕಿತ್ಸೆಗೆ ಜನ ಪರದಾಡುವಂತಾಗಿದೆ. ಅಂತೆಯೇ ಕಾರ್ಕಳ ಸರಕಾರಿ ಆಸ್ಪತ್ರೆಯ ವೈದ್ಯರು ಮಹಿಳೆಯೋರ್ವರಿಗೆ ಹೆರಿಗೆಗೆ ನಿರಾಕರಿಸಿದ್ದಾರೆ. ಆತಂಕದ ನಡುವಲ್ಲಿಯೇ ಮಹಿಳೆ ಉಡುಪಿಯ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.

ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಅದ್ರಲ್ಲೂ ಖಾಸಗಿ ಕ್ಲಿನಿಕ್, ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗೆ ನಿರಾಕರಿಸಲಾಗುತ್ತಿದೆ. ಹೀಗಾಗಿಯೇ ಸರಕಾರಿ ಆಸ್ಪತ್ರೆಗಳನ್ನೇ ಜನ ನೆಚ್ಚಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೇಕಾರಿನ ನಿವಾಸಿ ಇಂದಿರಾ ಶೆಟ್ಟಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಮನೆಯಲ್ಲಿ ತಾಯಿಯನ್ನು ಹೊರತು ಪಡಿಸಿದ್ರೆ ಬೇರಾರೂ ಇರಲಿಲ್ಲ. ಇಂದಿರಾ ಶೆಟ್ಟಿ ಅವರ ಪತಿ ಮುಂಬೈನಲ್ಲಿ ಉದ್ಯೋಗದಲ್ಲಿದ್ದು, ಲಾಕ್ ಡೌನ್ ನಿಂದಾಗಿ ಊರಿಗೆ ಬರೋದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿಯೇ ತಾಯಿ ಅಂಬುಲೆನ್ಸ್ ಮಾಡಿಕೊಂಡು ಕಾರ್ಕಳದ ಸರಕಾರಿ ಆಸ್ಪತ್ರೆಗೆ ಮಗಳನ್ನು ಕರೆತಂದಿದ್ದಾರೆ. ಆದರೆ ಕಾರ್ಕಳ ಆಸ್ಪತ್ರೆಯ ವೈದ್ಯರು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.

ಎಷ್ಟೇ ಗೋಗರೆದರೂ ವೈದ್ಯರು ಹೆರಿಗೆ ಮಾಡಿಸೋದಕ್ಕೆ ಸಾಧ್ಯವಿಲ್ಲ, ಬೇಕಾದ್ರೆ ಉಡುಪಿ ಅಥವಾ ಮಂಗಳೂರು ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ. ಕೂಡಲೇ ಇಂದಿರಾ ಅವರ ಪತಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೆ ಕರೆ ಮಾಡಿ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ವೈದ್ಯರಿಗೆ ಕರೆ ಮಾಡೋದಾಗಿ ಹೇಳಿದ್ದ ಶಾಸಕರು ಮತ್ತೆ ಸಹಾಯಕ್ಕೆ ಬರಲಿಲ್ಲ ಅಂತಾ ಇಂದಿರಾ ಶೆಟ್ಟಿ ಅವರ ಪೋಷಕರು ಆರೋಪಿಸುತ್ತಿದ್ದಾರೆ.

ವಿಪರೀತ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಇಂದಿರಾ ಶೆಟ್ಟಿ ಅವರನ್ನು ಅಂಬ್ಯುಲೆನ್ಸ್ ಮೂಲಕ ಕರೆತಂದು ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು. ಇಂದಿರಾ ಶೆಟ್ಟಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ತುರ್ತು ಸಂದರ್ಭದಲ್ಲಿಯೂ ಜನರ ಸಹಾಯಕ್ಕೆ ಬಾರದ ಕಾರ್ಕಳ ಸರಕಾರಿ ಆಸ್ಪತ್ರೆಯ ವೈದ್ಯರಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಕೊರೊನಾ ನೆಪದಲ್ಲಿ ವೈದ್ಯರು ಜನರಿಗೆ ತುರ್ತು ಸೇವೆಯನ್ನು ನೀಡಲು ನಿರಾಕರಿಸುತ್ತಿರೋದು ಗ್ರಾಮೀಣ ಭಾಗದ ಜನರಿಗೆ ಆತಂಕವನ್ನು ತಂದೊಡ್ಡಿದೆ. ಹೀಗಾಗಿ ಸರಕಾರ ಗ್ರಾಮೀಣ ಭಾಗದಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕಾದ ಅಗತ್ಯವಿದೆ.