ನವದೆಹಲಿ: ನಿಯಂತ್ರಿಸುವ ನೂರಾರು ಪ್ರಯತ್ನಗಳ ಬಳಿಕವೂ ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಿದ ಹಿನ್ನೆಲೆಯಲ್ಲಿ ಜನನಿಬಿಡವಾದ ಹಾಗೂ ಕೊರೋನಾ ಹಾಟ್ ಸ್ಪಾಟ್ ಗಳಾದ ಮಾರುಕಟ್ಟೆಗಳ ಲಾಕ್ ಡೌನ್ ಗೆ ಅನುಮತಿ ನೀಡುವಂತೆ ಕೋರಿದೆ ಎಂದು ಸಿಎಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿಎಂ ಅರವಿಂದ್ ಕೇಜ್ರಿವಾಲ್, ಈ ಹಿಂದೆ ಕೊರೋನಾ ಪ್ರಮಾಣ ತಗ್ಗಿದ್ದರಿಂದ ಮದುವೆ ಸೇರಿದಂತೆ ಶುಭ ಸಮಾರಂಭದಲ್ಲಿ 200 ಜನರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಈಗ ಈ ಆದೇಶವನ್ನು ಹಿಂಪಡೆಯಲು ಹಾಗೂ ಕೊರೋನಾ ಸೋಂಕು ಹೆಚ್ಚು ಹರಡಬಹುದಾದ ಮಾರುಕಟ್ಟೆ ಪ್ರದೇಶಗಳನ್ನು ಲಾಕ್ ಡೌನ್ ಮಾಡಲು ರಾಜ್ಯ ಚಿಂತನೆ ನಡೆಸಿದೆ ಎಂದಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಜನರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮರೆತು ಓಡಾಡಿದ್ದಾರೆ. ಹೀಗಾಗಿ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶವನ್ನು ಮತ್ತೆ ಲಾಕ್ ಡೌನ್ ಮಾಡಬೇಕಾದ ಅಗತ್ಯವಿದೆ. ಹೀಗಾಗಿ ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಅನುಮೋದನೆಗಾಗಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಅವರಿಗೆ ಕಳುಹಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಕೇಂದ್ರದ ಸೂಚನೆಯಂತೆ ಮದುವೆಯಲ್ಲಿ 200 ಅತಿಥಿಗಳಿಗೆ ಅವಕಾಶ ಕಲ್ಪಿಸಿದ್ದ ದೆಹಲಿ ಸರ್ಕಾರ ಈಗ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಈ ಸಂಖ್ಯೆಯನ್ನು 50 ಕ್ಕೆ ಇಳಿಸಿದೆ.

ಈಗಾಗಲೇ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣದಲ್ಲೂ ಏರಿಕೆಯಾಗಿದ್ದು, ಗಾಳಿ ಉಸಿರಾಟಕ್ಕೆ ಯೋಗ್ಯವಾಗಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಮತ್ತೊಮ್ಮೆ ರಾಷ್ಟ್ರರಾಜಧಾನಿಯಲ್ಲಿ ಲಾಕ್ ಡೌನ್ ಜಾರಿಯಾಗೋ ಸಾಧ್ಯತೆ ಇದೆ.