ಅಭಿಮಾನದ ಪರಾಕಾಷ್ಠೆ…! ಮಂಡ್ಯದ ಗಂಡಿಗೆ ಮದ್ದೂರಿನಲ್ಲಿ ಸಿದ್ಧವಾಯ್ತು ಗುಡಿ..!!

ಮಂಡ್ಯ: ನಟ ಅಂಬರೀಶ್ ಅನ್ನೋ ಹೆಸರು ಪೂರ್ಣ ಅನ್ನಿಸೋದೇ ಮಂಡ್ಯದ ಗಂಡು ಅನ್ನೋ ಟ್ಯಾಗ್ ಲೈನ್ ನಿಂದ. ಕೇವಲ ಹೆಸರು ಮಾತ್ರವಲ್ಲ ನಡೆ-ನುಡಿ-ಗತ್ತಿನಿಂದಲೂ ಅಂಬರೀಶ್ ಮಂಡ್ಯದ ಗಂಡೇ ಎನ್ನಿಸಿದ್ದರು. ಇಂತಹ ರೆಬೆಲ್ ಸ್ಟಾರ್ ಗೆ ಮಂಡ್ಯದ ಮಂದಿ ಗುಡಿ ಕಟ್ಟಿದ್ದು, ನಿತ್ಯ ಆರಾಧನೆಗೆ ಮುಂದಾಗಿದ್ದಾರೆ.

ಮಂಡ್ಯದ ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿ ಗ್ರಾಮದ ಜನತೆ ಅಗಲಿದ ಅಂಬಿಗಾಗಿ ಹಳ್ಳಿಯ ಸರ್ಕಸ್ ನಲ್ಲಿ ಗುಡಿಯೊಂದನ್ನು ನಿರ್ಮಿಸಿದ್ದಾರೆ. ಇದು ಕನ್ನಡದಲ್ಲಿ ನಟರೊಬ್ಬರಿಗೆ ನಿರ್ಮಿಸಲಾದ ಮೊದಲ ದೇವಾಲಯ. ನಿರ್ಮಾಣವಾದ ದೇವಾಲಯದಲ್ಲಿ ಅಂಬಿಯ ಕಂಚಿನ ಪುತ್ಥಳಿ ನಿರ್ಮಿಸಲಾಗಿದೆ.

ನವೆಂಬರ್ 24 ರಂದು ನಡೆಯುವ ನಟ ದಿ.ಅಂಬರೀಶ್ ಎರಡನೇ ಪುಣ್ಯತಿಥಿಯಂದು ಈ ಗುಡಿ ಹಾಗೂ ಪುತ್ಥಳಿಯನ್ನು ಅಂಬರೀಶ್ ಪತ್ನಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಉದ್ಘಾಟಿಸಲಿದ್ದಾರೆ.  ಅಂದಾಜು 8 ಲಕ್ಷ ರೂಪಾಯಿ  ವೆಚ್ಚದಲ್ಲಿ ಈ ಗುಡಿಯನ್ನು ನಿರ್ಮಿಸಲಾಗಿದೆ.

ಕೇವಲ ಗುಡಿ ನಿರ್ಮಾಣ ಮಾತ್ರವಲ್ಲದೇ, ಅಂಬರೀಶ್ ಚಿತಾಭಸ್ಮವನ್ನು ತಂದು ಒಂದು ವರ್ಷಗಳ ಕಾಲ ಪೂಜಿಸಿ ಬಳಿಕ ಅದನ್ನು ಹಾಕಿ ಗುಡಿ ನಿರ್ಮಿಸಿ ಪುತ್ಥಳಿಯನ್ನು ಸ್ಥಾಪಿಸಲಾಗಿದೆಯಂತೆ. ಅಂಬರೀಶ್ ಗುಡಿ ನಿರ್ಮಿಸಿರೋ ಈ ಗ್ರಾಮಸ್ಥರು ಅಂಬಿ ಬದುಕಿದ್ದಾಗಲೂ ಇಷ್ಟೇ ಅಭಿಮಾನ ತೋರುತ್ತಿದ್ದರು.

ಪ್ರತಿವರ್ಷ ಅಂಬರೀಶ್ ಹುಟ್ಟುಹಬ್ಬವನ್ನು ಈ ಗ್ರಾಮದಲ್ಲಿ ಉತ್ಸವದಂತೆ ಆಚರಿಸಲಾಗುತ್ತಿತ್ತಂತೆ. ಈಗ ಅವರ  ನಿಧನದ ಬಳಿಕ ಗುಡಿ ಸ್ಥಾಪಿಸಿ ನೆನಪನ್ನು ಅಮರವಾಗಿಸಲು ಮುಂದಾಗಿದ್ದಾರೆ. 2018 ರ ನವೆಂಬರ್ 24 ರಂದು ಅಂಬರೀಶ್ ಹೃದಯಾಘಾತದಿಂದ ನಿಧನರಾಗಿದ್ದರು.

Comments are closed.