ಕೋವಿಡ್ ಲಸಿಕೆ ಅಭಿಯಾನ ಆರಂಭ….! ವಾಕ್ಸಿನೇಶನ್ ಪಡೆಯೋದು ಹೇಗೆ ಗೊತ್ತಾ…?!

ಕೊರೋನಾ ಮಹಾಮಾರಿಗೆ ಲಸಿಕೆ ನೀಡುವ ಭಾರತದ ಅತಿದೊಡ್ಡ ಲಸಿಕಾ ಅಭಿಯಾನ 2.0 ಇಂದಿನಿಂದ ಆರಂಭವಾಗಿದ್ದು, ಇದರ ಅನ್ವಯ ದೇಶದ 27 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 60 ವರ್ಷ ಮೇಲ್ಪಟ್ಟವರು ಮತ್ತು ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 45 ರಿಂದ 59 ವರ್ಷ ವಯಸ್ಸಿನವರು ಈಗ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ದೇಶದಾದ್ಯಂತ 20 ಸಾವಿರ ಸರ್ಕಾರಿ ಆಸ್ಪತ್ರೆ ಹಾಗೂ 10 ಖಾಸಗಿ ಆಸ್ಪತ್ರೆ ಮೂಲಕ 27 ಕೋಟಿ ಜನರಿಗೆ ಲಸಿಕೆ ನೀಡಲು ಸಿದ್ಧತೆ ನಡೆದಿದ್ದು, ಬೆಂಗಳೂರಿನ 29 ಆಸ್ಪತ್ರೆಗಳಲ್ಲಿ ಈ ಲಸಿಕೆ ಲಭ್ಯವಿದೆ. ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೋವ್ಯಾಕ್ಸಿನ್ ಸ್ವದೇಶಿ ಲಸಿಕೆ ಪಡೆಯುವ ಮೂಲಕ ಚಾಲನೆ ನೀಡಿದ್ದಾರೆ.

35 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಲಸಿಕೆ ವಿತರಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ದೇಶದ ಆಯ್ದ ಸರ್ಕಾರಿ ಆಸ್ಪತ್ರೆ, ನೋಂದಾಯಿತ ಖಾಸಗಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರದಲ್ಲಿ ಈ ಲಸಿಕೆ ಲಭ್ಯವಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಉಚಿತವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ 250 ರೂಪಾಯಿ ದರ ನಿಗದಿ ಪಡಿಸಲಾಗಿದೆ.

150 ರೂಪಾಯಿ ಲಸಿಕೆ ದರ ಹಾಗೂ 100 ಸೇವಾಶುಲ್ಕ ವನ್ನು ಈ ದರ ಒಳಗೊಂಡಿದೆ. ಲಸಿಕೆ ಪಡೆಯಲು ಇಚ್ಛಿಸುವವರು ಕೋ_ವಿನ್ 2.0 ಆನ್ಲೈನ್ ಸಾಫ್ಟವೇರ್ ಮೂಲಕ ಹೆಸರು ನೊಂದಾಯಿಸಬಹುದಾಗಿದೆ. ಅಥವಾ ಸರ್ಕಾರಿ, ಖಾಸಗಿ ಲಸಿಕಾ ವಿತರಣಾ ಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ತೆರಳಿ ಲಸಿಕೆಗಾಗಿ ನೋಂದಣಿ ಮಾಡಿಸಬಹುದು.

ಸ್ಥಳೀಯ ಆರೋಗ್ಯ ಕಾರ್ಯಕರ್ತರು ಅರ್ಹರನ್ನು ಗುರುತಿಸಿ ಲಸಿಕೆ ಕೇಂದ್ರಕ್ಕೆ ಕರೆದೊಯ್ದು ಲಸಿಕೆ ಕೊಡಿಸಬಹುದು. ಆಧಾರ್ ಕಾರ್ಡ್, ಓಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಅಥವಾ ಜಾಬ್ ಕಾರ್ಡ್ ನ್ನು ದಾಖಲೆಯಾಗಿ ನೀಡಬಹುದು. www.cowin.gov.in ವೆಬ್ ಸೈಟ್ ನಲ್ಲಿ ಲಸಿಕೆ ಪಡೆಯಲು ನೋಂದಾಯಿಸಿಕೊಳ್ಳಬೇಕು.

 ಲಸಿಕೆ ವಿತರಿಸಲು ಮೂರು ಕೊಠಡಿಗಳಿದ್ದು,  ಒಂದರಲ್ಲಿ ಸರತಿಯಿಂದ ಕಾಯುವುದು, ಎರಡನೇ ಕೊಠಡಿಯಲ್ಲಿ ವೈದ್ಯರು  ಪರಿಶೀಲಿಸಿ ಚುಚ್ಚುಮದ್ದು ನೀಡುವುದು, ಬಳಿಕ ವಿಶ್ರಾಂತಿ ಕೊಠಡಿಯಲ್ಲಿ ಅರ್ಧ ಗಂಟೆ ವಿಶ್ರಾಂತಿ ಪಡೆದು ಮನೆಗೆ ತೆರಳಬಹುದು. ಭಾರತದಲ್ಲಿ ತಯಾರಿಸಲಾದ ಕೋವಿಶಿಲ್ಡ್ ಹಾಗೂ ಕೋವ್ಯಾಕ್ಸಿನ್  ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Comments are closed.