ಬೆಂಗಳೂರು : ವಿಶ್ವದಲ್ಲಿಯೇ ಕೊರೊನಾ ರೌದ್ರ ನರ್ತನ ಮೆರೆಯುತ್ತಿದೆ. ದೇಶದಲ್ಲಿಯೂ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ವಿರುದ್ದ ತೊಡೆತಟ್ಟಿರೋ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 22 ರಂದು ದೇಶದಾದ್ಯಂತ ಜನತಾ ಕರ್ಪ್ಯೂ ಜಾರಿಗೊಳಿಸಿದ್ದಾರೆ. ಜನತಾ ಕರ್ಪ್ಯೂ ಹೇಗಿರುತ್ತೆ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಕರ್ಪ್ಯೂ ಜಾರಿಯಾದ್ರೆ ಜನರನ್ನು ಬಲವಂತವಾಗಿ ಖಾಕಿ ಪಡೆ ಮನೆಯಲ್ಲಿ ಕೂರಿಸಿ ಬಿಡುತ್ತೆ. ಅಲ್ಲಿ ಬಂದೂಕು, ಲಾಠಿಯ ಭಯವಿರುತ್ತೆ. ಆದ್ರೆ ಜನತಾ ಕರ್ಪ್ಯೂ ಹಾಗಲ್ಲ. ಪೊಲೀಸರು ನಮ್ಮನ್ನು ಬಲವಂತವಾಗಿ ಮನೆಯಲ್ಲಿ ಕೂರಿಸೋದಿಲ್ಲ. ಬದಲಾಗಿ ಜನರೇ ಸ್ವಯಂ ಪ್ರೇರಿತರಾಗಿ ಕರ್ಪ್ಯೂ ಆಚರಣೆ ಮಾಡಬೇಕು. ಪ್ರಧಾನಿ ಮೋದಿ ಅವರು ಕರೆ ನೀಡಿರೋ ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರ ಬರುವಂತಿಲ್ಲ.

ಯಾವುದೇ ವಾಹನಗಳು ಕೂಡ ರಸ್ತೆಗೆ ಇಳಿಯೋದಿಲ್ಲ. ಜನರು ಒಂದಿಡೀ ದಿನ ಮನೆಯಲ್ಲಿಯೇ ಇರಬೇಕು. ಹೀಗೆ ಮಾಡೋದ್ರಿಂದ ಕೊರೊನಾ ವಿರುದ್ದ ಹೋರಾಟ ಮಾಡಬಹುದು ಅನ್ನೋ ಲೆಕ್ಕಾಚಾರ ಮೋದಿ ಅವರದ್ದು. ಪ್ರಧಾನಿ ಮೋದಿ ಕರೆ ನೀಡಿರೋ ಜನತಾ ಕರ್ಪ್ಯೂಗೆ ರಾಜ್ಯದಾದ್ಯಂತ ಬಾರೀ ಜನಬೆಂಬಲ ವ್ಯಕ್ತವಾಗಿದೆ.

ರಾಜ್ಯದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ವಿಮಾನ ಹಾರಾಟ ನಿಲ್ಲಿಸಿದ್ದು, ದೇಶಿಯ ವಿಮಾನಗಳ ಹಾರಾಟವೂ ವಿರಳವಾಗಿದೆ. ಇನ್ನು ಮಾರ್ಚ್ 21ರ ರಾತ್ರಿಯಿಂದಲೇ ದೇಶದಾದ್ಯಂತ ರೈಲು ಸಂಚಾರ ಸಂಪೂರ್ಣವಾಗಿ ಸ್ತಬ್ದವಾಗಲಿದೆ. ಕೆಎಸ್ ಆರ್ ಟಿಸಿ ಬಸ್ ಗಳು ಭಾನುವಾರ ರಸ್ತೆಗೆ ಇಳಿಯೋದಿಲ್ಲ. ಅಲ್ಲದೇ ಆಟೋ, ಟ್ಯಾಕ್ಸಿ ಸೇರಿದಂತೆ ಯಾವುದೇ ವಾಹನಗಳು ರಸ್ತೆಗಿಳಿಯೋದು ಅನುಮಾನ.

ಇನ್ನು ರಾಜ್ಯ ಸರಕಾರದ ಆದೇಶದಂತೆ ದರ್ಶಿನಿ, ಕಫೆ, ಹೋಟೆಲ್, ಸ್ಟಾರ್ ಹೋಟೆಲ್, ಬಿಎಂಟಿಟಿ, ಕೆಎಸ್ ಆರ್ ಟಿಸಿ, ಲಾರಿ, ನಮ್ಮ ಮೆಟ್ರೋ ರೈಲು, ಆಟೋ, ಓಲಾ, ಉಬರ್, ಎಪಿಎಂಸಿ, ತರಕಾರಿ ಮಾರುಕಟ್ಟೆ, ಮೀನುಮಾರುಕಟ್ಟೆ, ಆಭರಣಗಳ ಮಳಿಗೆ ಬಾರ್, ವೈನ್ ಶಾಪ್, ಕೈಗಾರಿಕೆಗಳು, ದೇವಸ್ಥಾನ, ಚಿತ್ರೋದ್ಯಮ,

ಇಂದಿರಾ ಕ್ಯಾಂಟಿನ್, ಮೀನುಗಾರಿಕಾ ಚಟುವಟಿಕೆ ಸೇರಿದಂತೆ ಬಹುತೇಕ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಲಿದೆ. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ತುರ್ತು ಸೇವೆಗಳಾದ ಅಂಬುಲೆನ್ಸ್ ಸೇವೆ, ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲು, ಪೇಪರ್ ಗಳು ಮಾತ್ರವೇ ಜನರಿಗೆ ಲಭ್ಯವಾಗಲಿದೆ.

ದೇಶದ ಜನರ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರೋ ಜನತಾ ಕರ್ಪ್ಯೂ ಸಕ್ಸಸ್ ಆಗೋದ್ರಲ್ಲಿ ಅನುಮಾನವೇ ಇಲ್ಲಾ. ಕೊರೊನಾ ವಿರುದ್ದ ತೊಡೆ ತಟ್ಟಿರೋ ಪ್ರಧಾನಿ ನರೇಂದ್ರ ಮೋದಿ ನಡೆಗೆ ದೇಶದ ಜನರೇ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಭಾನುವಾರ ತುರ್ತು ಅಗತ್ಯವಿದ್ರೆ ಮಾತ್ರವೇ ರಸ್ತೆಗಿಳಿಯಿರಿ ಅಂತಾ ಕೇಂದ್ರ, ರಾಜ್ಯ ಸರಕಾರಗಳು ಮನವಿ ಮಾಡಿಕೊಂಡಿವೆ.
