ಬಹುಭಾಷಾ ನಟ ಅರ್ಜುನ್ ಹನುಮನ ಆರಾಧಕರೂ ಹೌದು. ತಮ್ಮ ಆರಾಧ್ಯ ದೈವ ಹನುಮಂತನಿಗೆ ದೇವಾಲಯ ನಿರ್ಮಿಸುವ ಕನಸು ಹೊತ್ತು ಪ್ರಯತ್ನ ಆರಂಭಿಸಿದ್ದ ಅರ್ಜುನ್ ಸರ್ಜಾ ಕನಸು ನನಸಾದ ಖುಷಿಯಲ್ಲಿದ್ದಾರೆ.

ನಾಳೆ ಅಂದ್ರೆ ಜುಲೈ 1 ರಂದು ಚೈನೈನ ಗೇರುಗಂಬಾಕ್ ನಲ್ಲಿ ಸರ್ಜಾ ಕುಟುಂಬದಿಂದ ನಿರ್ಮಿಸಲಾದ ಆಂಜನೇಯ ದೇವಾಲಯ ಲೋಕಾರ್ಪಣೆಗೊಳ್ಳಲಿದೆ. ಹಲವು ವರ್ಷಗಳಿಂದ ನಡೆದಿದ್ದ ದೇವಾಲಯದ ನಿರ್ಮಾಣ ಕಾರ್ಯ ಇದೀಗ ಪೂರ್ಣಗೊಂಡಿದೆ.

ಅರ್ಜುನ್ ಸರ್ಜಾ ಈ ಬಗ್ಗೆ ವಿಡಿಯೋವೊಂದನ್ನು ರೆಕಾರ್ಡ್ ಮಾಡಿ ವಿವರಣೆ ನೀಡಿದ್ದಾರೆ. ನನ್ನ ಕನಸಿನ ದೇವಾಲಯ ನಿರ್ಮಾಣ ಮುಗಿದಿದೆ. ನನ್ನ ಬಂಧುಗಳನ್ನು, ಸಂಬಂಧಿಗಳನ್ನು, ಸ್ನೇಹಿತರನ್ನು ಕರೆದು ಅದ್ದೂರಿಯಾಗಿ ದೇವಾಲಯ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮಾಡುವ ಕನಸಿತ್ತು.

ಆದರೆ ಕೊರೋನಾದಂತಹ ಸಂದಿಗ್ಧದಿಂದಾಗಿ ಇದೆಲ್ಲವೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಗತ್ಯ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜುಲೈ 1 ಹಾಗೂ 2 ರಂದು ನಮ್ಮ ದೇವಾಲಯದ ಉದ್ಘಾಟನಾ ಸಮಾರಂಭ ನಡೆಯಲಿದ್ದು,ಕುಂಭಾಭೀಷೇಕ ಕೂಡ ನಡೆಯಲಿದೆ.

https://www.instagram.com/p/CQq5-qDHmUI/?utm_medium=copy_link
ನೀವೆಲ್ಲರೂ ಈ ಸಮಾರಂಭವನ್ನು ನೋಡಲು ಅವಕಾಶ ಕಲ್ಪಿಸಲು ಯೂಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡಲಿದ್ದೇವೆ ಎಂದು ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ. ಸ್ವತಃ ಅರ್ಜುನ್ ಸರ್ಜಾ ಸಹ ಈ ಮೂರ್ತಿ ಕೆತ್ತನೆಯಲ್ಲಿ ಪಾಲ್ಗೊಂಡಿದ್ದ ವಿಡಿಯೋ ಪೋಟೋಗಳು ವೈರಲ್ ಆಗಿದ್ದವು.

ಸಹಜವಾಗಿ ಆಂಜನೇಯ ಮೂರ್ತಿ ನಿಂತಿರುವಂತೆ ದರ್ಶನ ನೀಡೋದು ಸಾಮಾನ್ಯ. ಆದರೆ ಇಲ್ಲಿ ಮಾತ್ರ ಆಂಜನೇಯ ಪದ್ಮಾಸನದಲ್ಲಿ ಕುಳಿತ ಸ್ಥಿತಿಯಲ್ಲಿದ್ದು, ವಿಶ್ವದ ಅತಿ ಎತ್ತರದ ಆಂಜನೇಯ ಎಂಬ ಕೀರ್ತಿಗೂ ಈ ಮೂರ್ತಿ ಭಾಜನವಾಗಿದೆ.