ಬಸವಕಲ್ಯಾಣ ಉಪಚುನಾವಣೆಯಲ್ಲಿ ಸ್ವಾಮೀಜಿಯೊಬ್ಬರು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಘೋಷಣೆ ವೇಳೆ ತಮ್ಮ ಬಳಿ ಬರೋಬ್ಬರಿ 45 ಕೆಜಿ ಚಿನ್ನ ಇರುವುದಾಗಿ ಘೋಷಿಸಿದ್ದಾರೆ.

ಬರಡೋಲಾದ ಶ್ರೀವೆಂಕಟೇಶ್ವರ್ ಸ್ವಾಮೀಜಿ ಬಸವಕಲ್ಯಾಣ ಉಪಚುನಾವಣೆಯಲ್ಲಿ ಆಯ್ಕೆ ಬಯಸಿದ್ದು, ಹಿಂದೂಸ್ತಾನ್ ಜನತಾ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಇದುವರೆಗೂ ಅಂದಾಜು 25 ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧಿಸಿದ ಅನುಭವ ಹೊಂದಿರೋ ವೆಂಕಟೇಶ್ವರ್ ಸ್ವಾಮೀಜಿ ಕೇಜ್ರಿವಾಲ್ ವಿರುದ್ಧ ವೂ ಕಣಕ್ಕಿಳಿದಿದ್ದರು.

ಶ್ರೀವೆಂಕಟೇಶ್ವರ್ ಸ್ವಾಮೀಜಿ ಗ್ರಾಮಪಂಚಾಯತ್ ನಿಂದ ಆರಂಭಿಸಿ ಲೋಕಸಭೆ ಚುನಾವಣವರೆಗೆ ಹಲವು ಹಂತದ ಎಲೆಕ್ಷನ್ ನಲ್ಲಿ ಸ್ಪರ್ಧಿಸಿದ್ದಾರೆ. ಒಂದರ್ಥದಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಇವರಿಗೆ ಹವ್ಯಾಸ. ವೆಂಕಟೇಶ್ವರ್ ಮಹಾಸ್ವಾಮೀಜಿ ಕೇವಲ ಕರ್ನಾಟಕ ಮಾತ್ರವಲ್ಲ, ಗೋವಾ,ದೆಹಲಿ,ಗುಜರಾತ್, ಮಹಾರಾಷ್ಟ್ರ ಚುನಾವಣೆಯಲ್ಲೂ ಸ್ಪರ್ಧಿಸಿದ ಅನುಭವ ಹೊಂದಿದ್ದಾರೆ.

ಧಾರವಾಡದಲ್ಲಿ ಬಿಕಾಂ ಪದವಿ ಪಡೆದಿರುವ ವೆಂಕಟೇಶ್ವರ್ ಸ್ವಾಮೀಜಿ ವಿಜಯಪುರ ಜಿಲ್ಲೆಯ ಬರಡೋಲ ಮೂಲದವರು. ಈ ಹಿಂದೆ ದೆಹಲಿಯಲ್ಲಿ ಕೇಜ್ರಿವಾಲ್ ವಿರುದ್ಧ ಸ್ಪರ್ಧೆ ಬಯಸಿದ್ದ ಸ್ವಾಮೀಜಿ ಕಾಂಗ್ರೆಸ್ ನಿಂದ ಟಿಕೇಟ್ ಕೇಳಿದ್ದರು. ಆದರೆ ಕಾಂಗ್ರೆಸ್ ಟಿಕೇಟ್ ನೀಡಿರಲಿಲ್ಲ.ಹೀಗಾಗಿ ಕೇಜ್ರಿವಾಲ್ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

ಬಸವಕಲ್ಯಾಣ ಉಪಚುನಾವಣೆ ವೆಂಕಟೇಶ್ವರ್ ಸ್ವಾಮೀಜಿಯ 26 ನೇ ಚುನಾವಣೆಯಾಗಿದೆ. ಸ್ವಾಮೀಜಿ ಚುನಾವಣೆಗಿಂತ ಅವರು ಸಲ್ಲಿಸಿದ ಆಸ್ತಿ ಅಫಡವಿಟ್ ಅತ್ಯಂತ ಆಸಕ್ತಿದಾಯಕವಾಗಿದ್ದು, ತಮ್ಮ ಬಳಿಕ 45 ಕೆಜಿ, ಪತ್ನಿ ಬಳಿ 23 ಲಕ್ಷದ ಚಿನ್ನ ಹಾಗೂ 4 ಲಕ್ಷ ನಗದು ಇದೆ ಎಂದಿದ್ದಾರೆ.