ಹಗಲು ರಾತ್ರಿ ಸಿಎಂ ಬಿಎಸ್ವೈ ಬದಲಾವಣೆಯನ್ನೇ ಧ್ಯಾನಿಸಿದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕೊನೆಗೂ ತಮ್ಮ ಆಸೆ ಈಡೇರಿಸಿಕೊಂಡ ಖುಷಿಯಲ್ಲಿದ್ದಾರೆ. ಮಾತ್ರವಲ್ಲ ಬೊಮ್ಮಾಯಿಗೆ ಸಂಪೂರ್ಣ ಬೆಂಬಲ ಘೋಷಿಸಿದ ಯತ್ನಾಳ್ ಗಡ್ಡಕ್ಕೆ ಕತ್ತರಿ ಹಾಕುವ ಮೂಲಕ ಬಿಎಸ್ವೈ ರಾಜೀನಾಮೆಯನ್ನು ಸಂಭ್ರಮಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಶಾಸಕಾಂಗ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್, ಕೊನೆಗೂ ನಮ್ಮ ಆಸೆಯನ್ನು ಹೈಕಮಾಂಡ್ ಈಡೇರಿಸಿದೆ. ಯಡಿಯೂರಪ್ಪನವರನ್ನು ಕೆಳಗಿಳಿಸಬೇಕಿತ್ತು. ಆ ಕೆಲಸ ಆಗಿದೆ. ಇನ್ನು ಯಾವುದೇ ಬೇಸರವಿಲ್ಲ.ಬೊಮ್ಮಾಯಿ ನೇತೃತ್ವದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದಿದ್ದಾರೆ.

ಬಿಎಸ್ವೈ ರಾಜೀನಾಮೆ ನಿಮಗೆ ಖುಷಿ ತಂದಿದ್ಯಾ ಅನ್ನೋ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ಹೌದು ಇದು ಬಹಳ ದಿನಗಳ ಹಿಂದೆಯೇ ಆಗಬೇಕಿತ್ತು. ವರಿಷ್ಠರು ಈಗ ಈ ಕೆಲಸ ಮಾಡಿದ್ದಾರೆ. ಅದಕ್ಕೆ ನೋಡಿ ನಾನು ಗಡ್ಡ ಬೋಳಿಸಿಕೊಂಡು ಸಂಭ್ರಮಾಚರಣೆ ಮಾಡಿದ್ದೇನೆ ಎಂದಿದ್ದಾರೆ.

ಬಿಎಸ್ವೈ ಸಿಎಂ ಪಟ್ಟಕ್ಕೇರಿದಾಗಿನಿಂದಲೂ ಯಡಿಯೂರಪ್ಪರನ್ನು ಬದಲಾಯಿಸುತ್ತಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂದು ಹಗಲು ರಾತ್ರಿ ಹೇಳಿಕೆಗಳನ್ನು ನೀಡುತ್ತಲೇ ಇದ್ದ ಯತ್ನಾಳ ಮಾತು ಕೊನೆಗೂ ನಿಜವಾಗಿದೆ.