ಮುಖ್ಯಮಂತ್ರಿಗಳ ವಿರುದ್ಧವೇ ಈಶ್ವರಪ್ಪ ವಾರ್….! ರಾಜ್ಯಪಾಲರ ಅಂಗಳ ತಲುಪಿತು ಸರ್ಕಾರದ ಒಳಜಗಳ…!!

ಉಪಚುನಾವಣೆ ಎದುರಿನಲ್ಲೇ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಸಂಪುಟದ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿಗಳ ವಿರುದ್ಧವೇ ತಿರುಗಿ ಬಿದ್ದಿದ್ದು, ಅನಗತ್ಯ ಹಸ್ತಕ್ಷೇಪದ ಆರೋಪದ ಜೊತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈಶ್ವರಪ್ಪ ಬರೆದಿರುವ ಪತ್ರ ತೀವ್ರ ಮಹತ್ವ ಪಡೆದುಕೊಂಡಿದ್ದು, ವಿಪಕ್ಷಗಳು  ತಕ್ಷಣ ರಾಜ್ಯಪಾಲರ ಆಡಳಿತ ಹೇರಬೇಕೆಂದು ಒತ್ತಾಯಿಸಿದ್ದರೇ ಬಿಜೆಪಿ ಹೈಕಮಾಂಡ್ ಕೂಡ ಆತಂಕಕ್ಕೆ ಒಳಗಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದು, ಇದರಿಂದ ಹಿರಿಯ ಶಾಸಕ ಹಾಗೂ ಸಚಿವನಾದ ನನಗೆ ಮುಜುಗರವಾಗುತ್ತಿದೆ. ಆಡಳಿತ ನಿರ್ಣಯಗಳನ್ನು ಕೈಗೊಳ್ಳಲು ಬಿಡುತ್ತಿಲ್ಲ ಎಂದು ಈಶ್ವರಪ್ಪ ಆರೋಪಿಸಿದ್ದಾರೆ. ರಾಜ್ಯಪಾಲರಿಗೆ 5 ಪುಟಗಳ ಸುಧೀರ್ಘ ಪತ್ರ ಬರೆದಿರುವ ಈಶ್ವರಪ್ಪ ಪತ್ರದ ಪ್ರತಿಯನ್ನು ಬಿಜೆಪಿ ವರಿಷ್ಠರಿಗೂ ಕಳುಹಿಸಿದ್ದಾರೆ ಎನ್ನಲಾಗಿದೆ.

ಹಣಕಾಸು ಇಲಾಖೆ 2020-21ರ ಬಜೆಟ್‌ನಲ್ಲಿ ಪ್ರಕಟಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಅನುದಾನವನ್ನು ತಮ್ಮ ಇಲಾಖೆಗೆ ನೀಡಲಿಲ್ಲ.  ಹಣಕಾಸು ಇಲಾಖೆ 81 ವಿಧಾನಸಭಾ ಕ್ಷೇತ್ರಗಳಿಗೆ 775 ಕೋಟಿ ಅನುಮೋದನೆ ನೀಡಿದೆ. ಒದೊಂದು ವಿಧಾನಸಭಾ ಕ್ಷೇತ್ರಕ್ಕೆ 5 ಕೋಟಿಯಿಂದ 23 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಹಣಕಾಸು ಇಲಾಖೆಯ ದೊಡ್ಡ ಮೊತ್ತದ ಅನುಮೋದನೆ ಬೇಕಾಬಿಟ್ಟಿ  ನೀಡಿದೆ. ಮುಖ್ಯಮಂತ್ರಿಗಳ ಆಪ್ತರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ.

ಮುಖ್ಯಮಂತ್ರಿಗಳ ಈ ಆಡಳಿತ ವೈಖರಿಯಿಂದ ಗ್ರಾಮೀಣ ಮೂಲ ಸೌಕರ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಇಲಾಖೆ ಯೋಜನೆಗಳ ಮೇಲೆ ದೀರ್ಘಾವಧಿಯಲ್ಲಿ ಪರಿಣಾಮ ಬೀರಲಿದೆ. ಹಣಕಾಸು ಇಲಾಖೆಯ ಆದೇಶದಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳ ಶಾಸಕರಿಗೂ ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಿದ್ದಾರೆ. ಬಿಜೆಪಿ 32, ಜೆಡಿಎಸ್ 18, ಕಾಂಗ್ರೆಸ್ 30, ಬಿಎಸ್‌ಪಿ 1 ಹೀಗೆ 81 ಶಾಸಕರಿಗೆ ಅನುದಾನ ನೀಡಲಾಗಿದೆ. 2020-21 ಬಜೆಟ್‌ ಪ್ಯಾರಾ 147ರಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಗ್ರಾಮೀಣ ಸುಮಾರ್ಗ ಯೋಜನೆಯನ್ನು ಪ್ರಕಟಿಸಲಾಗಿತ್ತು. ಈ ಯೋಜನೆಯಡಿ 5 ವರ್ಷಗಳಲ್ಲಿ 20 ಸಾವಿರ ಕಿ. ಮೀ. ಅಭಿವೃದ್ಧಿಪಡಿಸಲು 780 ಕೋಟಿ ನಿಗದಿ ಮಾಡಲಾಗಿತ್ತು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 30 ಕಿ. ಮೀ. ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ನಮ್ಮ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ನಿಗದಿ ಮಾಡಿದ ಹಣವನ್ನು ಹಣಕಾಸು ಇಲಾಖೆ ನೀಡಲಿಲ್ಲ. ಆಗಾಗ ಪತ್ರಬರೆದರೂ ಇಲಾಖೆ ಹಣ ಬಿಡುಗಡೆ ಇದುವರೆಗೂ  ಗ್ರಾಮೀಣಾಭಿವೃದ್ಧಿ ಇಲಾಖೆಗೆ ವಿವಿಧ ಅಭಿವೃದ್ಧಿ ಕಾರ್ಯಕ್ಕಾಗಿ  3998.56 ಕೋಟಿ ಅನುಮೋದನೆ ನೀಡಲಾಗಿದೆ. ಆದರೆ ಅದರಲ್ಲಿ 1600.42 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಆಗದೇ ಇರುವ ಮೊತ್ತ 2398.18 ಕೋಟಿ. ಇಲಾಖೆಯಲ್ಲಿ ಜಾರಿಯಲ್ಲಿರುವ ಯೋಜನೆಗಳನ್ನು ಕಡೆಗಣಿಸಲಾಗುತ್ತಿದೆ. ಹಣಕಾಸು ಇಲಾಖೆಯ ಪ್ರಕ್ರಿಯೆಗಳಿಂದ ನಮ್ಮ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರ ಮುಂದೆ ಮುಜುಗರಕ್ಕೆ ಒಳಗಾಗಿದ್ದೇನೆ. ಪಕ್ಷದಲ್ಲಿ ಅಧಿಕಾರದಲ್ಲಿದ್ದು, ನಮ್ಮ ಪಕ್ಷದ ಶಾಸಕರನ್ನು ಕಡೆಗಣಿಸಲಾಗಿದೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.

ಈಶ್ವರಪ್ಪ ಬರೆದಿದ್ದಾರೆ ಎನ್ನಲಾದ ಪತ್ರದಿಂದ ರಾಜ್ಯದಲ್ಲಿ ವಿರೋಧ ಪಕ್ಷಗಳಿಗೆ ಮತ್ತಷ್ಟು ಬಲಬಂದಂತಾಗಿದ್ದು, ಈಶ್ವರಪ್ಪ ಗಂಭೀರ ಸ್ವರೂಪದ ಆರೋಪ ಮಾಡಿರೋದರಿಂದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.

Comments are closed.