
ತುಮಕೂರು: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬಿಗ್ ಫೈಟ್ ಗೆ ಕಾರಣವಾಗಿದ್ದ ಶಿರಾ ಕ್ಷೇತ್ರದಲ್ಲಿ ಕೊನೆಗೂ ಬಿಜೆಪಿ ಗೆಲುವು ಸಾಧಿಸಿದ್ದು, ಬಿಜೆಪಿಯ ರಾಜೇಶ್ ಗೌಡ ಜಯಭೇರಿ ಬಾರಿಸಿದ್ದಾರೆ. ಶಿರಾದಲ್ಲಿ ಇದು ಬಿಜೆಪಿಯ ಮೊದಲ ಗೆಲುವಾಗಿದ್ದು ಆ ಮೂಲಕ ಬೈ ಎಲೆಕ್ಷನ್ ಎರಡೂ ಸ್ಥಾನವೂ ಕಮಲ ಪಾಳಯಕ್ಕೆ ಸಂದಿದೆ.

ಉಪಚುನಾವಣೆ ಯ ಮತ ಎಣಿಕೆಯ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಹಣಾಹಣಿ ಏರ್ಪಟ್ಟಿದ್ದು, ಬಿಜೆಪಿ ಅಭ್ಯರ್ಥಿ 69,559 ಮತ ಪಡೆದಿದ್ದಾರೆ. ಇವಿಎಂ ಕೌಟಿಂಗ್ ಬಹುತೇಕ ಮುಕ್ತಾಯಗೊಂಡಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿ ಉಳಿದಿದೆ.

ಬಿಜೆಪಿಯಿಂದ ರಾಜೇಶ್ ಗೌಡ್ ಕಣದಲ್ಲಿದ್ದರೇ, ಕಾಂಗ್ರೆಸ್ ನಿಂದ ಮಾಜಿ ಸಚಿವ ಜಯಚಂದ್ರ ಹಾಗೂ ಜೆಡಿಎಸ್ ನಿಂದ ಅಮ್ಮಾಜಮ್ಮಾ ಕಣದಲ್ಲಿದ್ದರು. ನವೆಂಬರ್ 3 ರಂದು ನಡೆದ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ 84.54 ರಷ್ಟು ಮತದಾನವಾಗಿತ್ತು.

ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಯ ರಾಜೇಶ್ ಗೌಡ್ ಶಾಸಕರಾಗಲಿದ್ದಾರೆ ಎನ್ನಲಾಗಿತ್ತು. ಸಮೀಕ್ಷೆಯಂತೆ ಬಿಜೆಪಿ ಗೆಲುವು ಸಾಧಿಸಿದೆ. 2008 ಹಾಗೂ 2013 ರ ಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಹೀಗಾಗಿ ಈ ಭಾರಿ ಚುನಾವಣೆ ಗೆಲ್ಲಲೇ ಬೇಕೆಂದು ನಿರ್ಧರಿಸಿದ್ದ ಬಿಜೆಪಿ ಸಾಕಷ್ಟು ಗಮನ ನೀಡಿ ಉಪಚುನಾವಣೆ ಘೋಷಣೆಯಾದಾಗಿನಿಂದ ಭರ್ಜರಿ ಪ್ರಚಾರ ಆರಂಭಿಸಿತ್ತು.

2018 ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸತ್ಯನಾರಾಯಣ ವಿರುದ್ಧ ಸೋತಿದ್ದ ಮಾಜಿ ಸಚಿವ ಜಯಚಂದ್ರ್, ಈ ಭಾರಿ ಕಮಲಪಾಳಯದ ಎದುರು ಸೋಲೊಪ್ಪಿಕೊಂಡಿದ್ದಾರೆ. 2018 ರ ಚುನಾವಣೆ ಗೆಲುವಿನಿಂದ ಸಂಭ್ರಮದಲ್ಲಿದ್ದ ಜೆಡಿಎಸ್ ಸತ್ಯನಾರಾಯಣ ಅಕಾಲಿಕ ನಿಧನದ ಅನುಕಂಪದ ಅಲೆ ಬಳಸಿಕೊಳ್ಳಲು ಅವರ ಪತ್ನಿ ಅಮ್ಮಾಜಮ್ಮಾಗೆ ಟಿಕೇಟ್ ನೀಡಿದ್ದರೂ ಪ್ರಯೋಜನವಾಗಿಲ್ಲ.