ಬೆಂಗಳೂರು: ಈಗಾಗಲೇ ಹಾಲಿಮಾಜಿ ಸಿಎಂಗಳು ಕಣಕ್ಕಿಳಿದಿರೋದರಿಂದ ಸಾಕಷ್ಟು ರಂಗೇರಿರೋ ಆರ್.ಆರ್.ನಗರ ಚುನಾವಣಾ ನಾಳೆ ಸ್ಟಾರ್ ಪ್ರಚಾರಕ್ಕೆ ಸಾಕ್ಷಿಯಾಗಲಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಣಕ್ಕಿಳಿದು ಮುನಿರತ್ನ ಪರ ಮತಯಾಚನೆ ಮಾಡಲಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣೆ ವೇಳೆ ಜೋಡೆತ್ತು ಎಂಬ ಅನ್ವರ್ಥಕನಾಮದೊಂದಿಗೆ ಸುಮಲತಾ ಗೆಲುವಿಗೆ ಹಗಲಿರುಳು ದುಡಿದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಪೈಕಿ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಚುನಾವಣಾ ಪ್ರಚಾರ ಕಣಕ್ಕೆ ಧುಮಕಲಿದ್ದು, ನಿರ್ಮಾಪಕ ಹಾಗೂ ಆರ್.ಆರ್.ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಗುರುವಾರ ಆರ್.ಆರ್.ನಗರದಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ.

ಕ್ಷೇತ್ರದ ರಾಜರಾಜೇಶ್ವರಿ ದೇವಾಲಯದಿಂದ ರೋಡ್ ಶೋ ಆರಂಭವಾಗಲಿದ್ದು, ಕ್ಷೇತ್ರದಾದ್ಯಂತ ನಡೆಯಲಿದೆ. ದರ್ಶನ್ ಗೆ ಇನ್ನಷ್ಟು ಫಿಲಂ ಸ್ಟಾರ್ ಗಳು ಸಾಥ್ ನೀಡುವ ನೀರಿಕ್ಷೆ ಇದೆ. ಕೆಲದಿನಗಳ ಹಿಂದೆಯಷ್ಟೇ ಮುನಿರತ್ನ ದರ್ಶನ್ ಮತ್ತು ಯಶ್ ಗೆ ಪ್ರಚಾರಕ್ಕೆ ಆಗಮಿಸುವಂತೆ ಕೋರಿದ್ದರು.

ದರ್ಶನ್ ಈಗಾಗಲೇ ಹಲವು ಚುನಾವಣೆಗಳಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು, ಪಕ್ಷದ ಪರವಾಗಿ ಪ್ರಚಾರ ಮಾಡದೇ ತನ್ನ ಸ್ನೇಹಿತರ ಪರ ಪ್ರಚಾರ ಮಾಡೋದು ದರ್ಶನ್ ವಿಶೇಷತೆ. ಅವರಿಗೆ ಎಲ್ಲ ಪಕ್ಷದಲ್ಲೂ ಸ್ನೇಹಿತರಿರೋದರಿಂದ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ದರ್ಶನ್ ಮತಯಾಚನೆ ಮಾಡುತ್ತಾರೆ. ಮಂಡ್ಯದಲ್ಲಿ ಸುಮಲತಾ ಗೆಲುವಿಗೆ ದರ್ಶನ್ ಹಾಗೂ ಯಶ್ ಶ್ರಮವೇ ಕಾರಣವಾಗಿತ್ತು.

ಇದೀಗ ನೆಕ್ ಟೂ ನೆಕ್ ಫೈಟ್ ಇರೋ ಆರ್.ಆರ್.ನಗರ ಕ್ಷೇತ್ರದಲ್ಲಿ ದರ್ಶನ್ ಪ್ರಚಾರ ಮಾಡ್ತಿರೋದು ಮುನಿರತ್ನ ಗೆ ವರವಾಗಲಿದೆ ಅಂತಾನೇ ಹೇಳಲಾಗ್ತಿದೆ. ಮೂಲಗಳ ಪ್ರಕಾರ ದರ್ಶನ್ ಬಳಿಕ ಯಶ್ ಕೂಡ ಆರ್.ಆರ್.ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಆರ್.ಆರ್.ನಗರ ಕ್ಷೇತ್ರವನ್ನು ಗೆಲ್ಲಲು ಬಿಜೆಪಿ ಸರ್ಕಸ್ ನಡೆಸಿದ್ದು, ನಾಳೆ ದರ್ಶನ್ ಪ್ರಚಾರ ಕಣಕ್ಕಿಳಿಯುತ್ತಿದ್ದರೇ, ಬುಧವಾರ ಮಧ್ಯಾಹ್ನ ಮಾದಕ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಕೂಡ ಮುನಿರತ್ನ ಪರ ಮತಯಾಚಿಸಿದ್ದಾರೆ.

ನವೆಂಬರ್ 3 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿಯಿಂದ ಮುನಿರತ್ನ ಕಣಕ್ಕಿಳಿದಿದ್ದರೇ, ಕಾಂಗ್ರೆಸ್ ನಿಂದ ಡಿ.ಕೆ.ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ಕಣಕ್ಕಿಳಿದಿದ್ದಾರೆ.