No School: ರಾಜ್ಯದಲ್ಲಿ 1 ರಿಂದ 10ನೇ ತರಗತಿಯವರೆಗೆ ಶಾಲಾರಂಭ ಸದ್ಯಕ್ಕಿಲ್ಲ….! ಹಂತ- ಹಂತವಾಗಿ ಕಾಲೇಜು ಆರಂಭಿಸಲು ಚಿಂತನೆ….!!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಪ್ರಭಾವ ತಗ್ಗುತ್ತಿದ್ದಂತೆ ರಾಜ್ಯ ಸರ್ಕಾರ ಅನ್ ಲಾಕ್ ಪ್ರಕ್ರಿಯೆ ಆರಂಭಿಸಿದೆ. ಆದರೆ  ಶಾಲಾರಂಭ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದಿರುವ ಸಿಎಂ ಬಿಎಸ್ವೈ ಕಾಲೇಜು ಆರಂಭಿಸುವ ಚಿಂತನೆ ಇದೆ ಎಂದಿದ್ದಾರೆ.

ಅನ್ ಲಾಕ್ ಪ್ರಕ್ರಿಯೆ ಹಾಗೂ ಮೂರನೇ ಅಲೆ ಹಿನ್ನೆಲೆಯಲ್ಲಿ ವಹಿಸಬೇಕಾದ ಎಚ್ಚರಿಕೆ  ಕುರಿತು ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವ ದಲ್ಲಿ ನಡೆದ ತಜ್ಞರ ಸಭೆ ಬಳಿಕ ಸಿಎಂ ಬಿಎಸ್ವೈ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಸದ್ಯಕ್ಕೆ 1 ರಿಂದ 10 ನೇ ತರಗತಿಯವರೆಗೆ ಶಾಲಾರಂಭ ಮಾಡುವ ಚಿಂತನೆ ಇಲ್ಲ. ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಸಿಎಂ ವಿವರಣೆ ನೀಡಿದ್ದಾರೆ.

ಲಸಿಕೆ ಅಭಿಯಾನ ಒಂದು ಹಂತಕ್ಕೆ ಬಂದ ಬಳಿಕ ಹಂತ ಹಂತವಾಗಿ ಕಾಲೇಜುಗಳನ್ನು ಆರಂಭಿಸಲಾಗುತ್ತದೆ. ಆದರೆ ಶಾಲೆಗಳು ಆರಂಭಿಸುವ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಇದರಿಂದ ಜುಲೈ 1 ರಿಂದ ಶೈಕ್ಷಣಿಕ ವರ್ಷ ಆರಂಭ ಎಂಬ ಉಹಾಪೋಹಕ್ಕೆ ತೆರೆ ಬಿದ್ದಂತಾಗಿದೆ.

ಜುಲೈ 1 ರಿಂದ ಆನ್ ಲೈನ್ ನಲ್ಲಿ ಶೈಕ್ಷಣಿಕ ಪ್ರಕ್ರಿಯೆಗಳನ್ನು ಆರಂಭಿಸಲು ಸರ್ಕಾರ ಶಾಲೆಗಳಿಗೆ ಸೂಚಿಸಿದ್ದು, ಅಂದಿನಿಂದಲೇ ದೂರದರ್ಶನ ಚಂದನ ವಾಹಿನಿಯಲ್ಲಿ ಸಂವೇದಾ ವಿಡಿಯೋ ಪಾಠ ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ದೂರದರ್ಶನದಲ್ಲಿ ಕನ್ನಡ, ಇಂಗ್ಲೀಷ್ ಹಾಗೂ ಉರ್ದು ಮಾಧ್ಯಮದ ಪಾಠಗಳು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಪ್ರಸಾರವಾಗಲಿದೆ.  

Comments are closed.