ಬೆಂಗಳೂರು: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿರುವ ಬೆನ್ನಲ್ಲೇ, ಬೆಂಗಳೂರಿನ ಜೈಲಿನಲ್ಲಿ ಖೈದಿಗಳಿಗೆ ಐಷಾರಾಮಿ ಸೌಲಭ್ಯ ಸಿಗುತ್ತಿರುವ ಸಂಗತಿ ಮತ್ತೆ ಸಾಬೀತಾಗಿದೆ. ಶಾಸಕ ಅರವಿಂದ್ ಬೆಲ್ಲದ್ ತಮಗೆ ಜೈಲಿನಿಂದ ಬೆದರಿಕೆ ಬಂದಿರುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಪ್ರಕರಣದ ಬೆನ್ನು ಬಿದ್ದಿರುವ ಬೆಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆರ್.ಎಸ್.ಎಸ್. ನಕಲಿ ನಾಯಕನ ಹೆಸರಿನಲ್ಲಿ ಸಿಕ್ಕಿಬಿದ್ದು ಹಲವು ವಂಚನೆ ಪ್ರಕರಣ ಎದುರಿಸುತ್ತಿರುವ ಯುವರಾಜ್ ಸ್ವಾಮಿ ಶಾಸಕ ಅರವಿಂದ್ ಬೆಲ್ಲದ್ ಗೆ ಕರೆ ಮಾಡಿ ಬೆದರಿಸಿದ್ದಾರೆ ಎನ್ನಲಾಗಿದೆ.

ಈ ಸಂಗತಿಗೆ ಬಯಲಿದೆ ಬರುತ್ತಿದ್ದಂತೆ ಬೆಂಗಳೂರು ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಡಿಸಿಪಿ ಅನುಚೇತ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.

ಡಿಸಿಪಿ ಅನುಚೇತ್ ಮಾರ್ಗದರ್ಶನದಲ್ಲಿ ಎಸಿಪಿ ಯತಿರಾಜ್ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಶಾಸಕ ಅರವಿಂದ ಬೆಲ್ಲದ್ ಗೆ ಕೆಲದಿನದ ಹಿಂದೆ ಜೈಲಿನಿಂದ ಕರೆಬಂದಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ನನ್ನ ಪೋನ್ ಟ್ಯಾಪ್ ಮಾಡಲಾಗುತ್ತಿದೆ. ನನಗೆ ಜೈಲಿನಿಂದಲೂ ಬೆದರಿಕೆ ಕರೆ ಬಂದಿದೆ. ಯಾವುದೋ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಷಡ್ಯಂತ್ರ ನಡೆದಿದೆ ಎಂದು ಶಾಸಕ ಬೆಲ್ಲದ್ ಆರೋಪಿಸಿದ್ದು,ಈ ಕುರಿತು ಸ್ಪೀಕರ್ ವಿಶ್ವೇಶ್ವರ್ ಹೆಗಡೆಯವರಿಗೂ ಪತ್ರ ಬರೆದಿದ್ದರು.

ಬೆಲ್ಲದ್ ದೂರಿನ ಹಿನ್ನೆಲೆಯಲ್ಲಿ ಗೃಹಸಚಿವರು ನಗರ ಪೊಲೀಸ ಆಯುಕ್ತರಿಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು.