ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯಲಿರುವ ಸಿಇಟಿ ಪರೀಕ್ಷೆಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಜುಲೈ 10 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

2021 ನೇ ಸಾಲಿನ ಸಿಇಟಿ ಪರೀಕ್ಷೆಗಾಗಿ ಇಂದಿನಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅಗಸ್ಟ್ 28 ಹಾಗೂ 29 ರಂದು ರಾಜ್ಯದಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

ಇಂಜೀನಿಯರಿಂಗ್, ಯೋಗಾ, ನ್ಯಾಚೋರಪತಿ,ಕೃಷಿ,ಹೋಂಸೈನ್ಸ್,ವೆಟರ್ನರಿ ಕೋರ್ಸ್ ಸೇರಿದಂತೆ ಹಲವು ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಪರೀಕ್ಷೆ ನಡೆಯಲಿದೆ.

ಈ ಭಾರಿ ಕೇವಲ ಸಿಇಟಿ ಅಂಕಗಳ ಆಧಾರದ ಮೇಲೆ ಕೋರ್ಸ್ ಗಳಿಗೆ ಪ್ರವೇಶಾವಕಾಶ ದೊರೆಯಲಿದೆ. ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಪಿಯು ಬೋರ್ಡ್ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.

cetonline.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಜೂನ್ 15 ರಿಂದ ಜುಲೈ 10 ರವರೆಗೆ ಅವಕಾಶವಿದೆ. ಆನ್ ಲೈನ್ ಮೂಲಕ ಶುಲ್ಕ ಪಾವತಿಗೆ ಜೂನ್ 13 ಕೊನೆಯ ದಿನ.

ವಿಶೇಷ ಪ್ರವರ್ಗಗಳ ದಾಖಲಾತಿ ಸಲ್ಲಿಕೆಗೆ ಜುಲೈ 14 ರಿಂದ 20 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಆನ್ ಲೈನ್ ಅರ್ಜಿ ಮಾಹಿತಿ ತಿದ್ದುಪಡಿಗೆ ಜುಲೈ 19 ರಿಂದ 22 ರವರೆಗೆ ಅವಕಾಶವಿದೆ. ಅಗಸ್ಟ್ 13 ರಿಂದ ಸಿಇಟಿ ಪ್ರವೇಶ ಪತ್ರ ಡೌನ್ ಲೌಡ್ ಮಾಡಿಕೊಳ್ಳಬಹುದಾಗಿದೆ.