ಸೋಮವಾರ, ಏಪ್ರಿಲ್ 28, 2025
HomeBreakingಕಂಪ್ಲೀಟ್ ಲಾಕ್ ಡೌನ್ ಮಾಡದಿದ್ರೆ ಅಪಾಯ ಗ್ಯಾರಂಟಿ ? ತಜ್ಞರ ಸಲಹೆ ಪಾಲಿಸುತ್ತಾ ಸರಕಾರ

ಕಂಪ್ಲೀಟ್ ಲಾಕ್ ಡೌನ್ ಮಾಡದಿದ್ರೆ ಅಪಾಯ ಗ್ಯಾರಂಟಿ ? ತಜ್ಞರ ಸಲಹೆ ಪಾಲಿಸುತ್ತಾ ಸರಕಾರ

- Advertisement -

ಬೆಂಗಳೂರು : ಕೊರೊನಾ ವಿಶ್ವದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದೆ. ರಾಜ್ಯದಲ್ಲಿಯೂ ಮಹಾಮಾರಿಯ ರುದ್ರನರ್ತನ ಮೇರೆಮೀರಿದೆ. ರಾಜ್ಯ ಸರಕಾರ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದೆ. ಆದರೆ ಇಡೀ ರಾಜ್ಯ ಲಾಕ್ ಡೌನ್ ಆಗದಿದ್ರೆ ಡೇಂಜರ್ ಅಂತಿದೆ ತಜ್ಞರ ವರದಿ.

ಕರುನಾಡಿನಲ್ಲಿ ಕೊರೊನಾ ಮಹಾಮಾರಿ ಓರ್ವನನ್ನು ಬಲಿಪಡೆದಿದ್ರೆ 22 ಮಂದಿ ಕೊರೊನಾ ಸೋಂಕಿನ ಬಳಲುತ್ತಿದ್ದಾರೆ. ರಾಜ್ಯದ 42,000 ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ಸಾವಿರಾರು ಮಂದಿ ಆರೋಗ್ಯ ತಪಾಸಣಾ ವರದಿಗಾಗಿ ಕಾದುಕುಳಿತಿದ್ದಾರೆ. ಕೊರೊನಾ ತಡೆಗೆ ರಾಜ್ಯ ಸರಕಾರ ಟಾಸ್ಕ್ ಪೋರ್ಸ್ ರಚನೆ ಮಾಡಿದೆ. ಆದರೆ ರಾಜ್ಯ ಸರಕಾರ ಕೊರೊನಾ ತಡೆಗೆ ಕಟ್ಟುನಿಟ್ಟಿನ ಖಡಕ್ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ತಜ್ಞ ವೈದ್ಯರು ರಾಜ್ಯವನ್ನು ಸಂಪೂರ್ಣವಾಗಿ 15 ದಿನಗಳ ಕಾಲ ಲಾಕ್ ಡೌನ್ ಮಾಡದೇ ಕೊರೊನಾ ತಡೆ ಅಸಾಧ್ಯವೆಂದಿವೆ.

ರಾಜ್ಯ ಈಗಾಗಲೇ ಕೊರೊನಾ 2ನೇ ಸ್ಟೇಜ್ ದಾಟಿ, ಮೂರನೇ ಸ್ಟೇಜ್ ಗೆ ಕಾಲಿಟ್ಟಿದೆ ಎನ್ನಲಾಗುತ್ತಿದೆ. ಇಂತಹ ಸಮಯದಲ್ಲಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಅಂತಾ ತಜ್ಞರು ತನ್ನ ರಹಸ್ಯ ವರದಿಯಲ್ಲಿ ಸೂಚ್ಯವಾಗಿ ತಿಳಿಸಿದ್ದಾರೆ. ಆದರೆ ರಾಜ್ಯ ಸರಕಾರ ಕೊರೊನಾ ಸೋಂಕು ದೃಢಪಟ್ಟಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಗಳೂರು, ಬೆಳಗಾವಿ, ಮೈಸೂರು, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು ಕಲಬುರಗಿ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದೆ. ಆದರೆ ರಾಜ್ಯದ ಕೇವಲ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದ್ರೆ ಪ್ರಯೋಜನವಿಲ್ಲ. ಸಂಪೂರ್ಣವಾಗಿ ಲಾಕ್ ಡೌನ್ ಆಗದ ಹೊರತು ಕೊರೊನಾ ತಡೆ ಅಸಾಧ್ಯವೆನ್ನುವುದು ತಜ್ಞರ ಅಭಿಪ್ರಾಯ.

ಡೆಡ್ಲಿ ಕೊರೊನಾ ವಿರುದ್ದ ಸಮರ ಸಾರಿರೋ ಸಿಂಗಾಪುರ, ಕೊರಿಯಾ, ಕುವೈತ್ ಸೇರಿದಂತೆ ಹಲವು ರಾಷ್ಟ್ರಗಳು ಕಂಪ್ಲೀಟ್ ಲಾಕ್ ಡೌನ್ ಮಾಡಿವೆ. ಕೇವಲ ಅಗತ್ಯವಸ್ತುಗಳನ್ನು ನಿಗದಿತ ಅವಧಿಯಲ್ಲದೇ ಸರಬರಾಜು ಮಾಡೋ ಮೂಲಕ ಜನರು ಮನೆಯಿಂದ ಹೊರ ಬರದಂತೆ ನೋಡಿಕೊಂಡಿವೆ. ಇದರಿಂದಾಗಿ ಸಿಂಗಾಪುರ, ಕೋರಿಯಾ ಹಾಗೂ ಕುವೈತ್ ನಲ್ಲಿ ಕೊರೊನಾ ವೈರಸ್ ಕೊಂಚ ಮಟ್ಟಿಗೆ ತಡೆಯಾಗಿದೆ. ಆದರೆ ಈ ವಿಚಾರದಲ್ಲಿ ಇಟಲಿ ಎಡವಿಬಿದ್ದಿದೆ. ಇಟಲಿಯಲ್ಲಿಯೂ ತಜ್ಞರು ಕಂಪ್ಲೀಟ್ ಲಾಕ್ ಡೌನ್ ಮಾಡುವಂತೆ ಸಲಹೆ ನೀಡಿದ್ದರು. ಆದರೆ ಇಟಲಿ ತಜ್ಞರ ಸೂಚನೆಯನ್ನು ಧಿಕ್ಕರಿಸಿತ್ತು. ಇದರಿಂದಲೇ ಇಟಲಿ ಇಂದು ಕೊರೊನಾ ವಿರುದ್ದದ ಹೋರಾಟವನ್ನೇ ಕೈಚೆಲ್ಲಿ ಕುಳಿತಿದೆ. ಇದೀಗ ಕರ್ನಾಟಕ ಸರಕಾರ ಕೂಡ ತಜ್ಞರ ವರದಿಯನ್ನು ಪರಿಗಣನೆ ಮಾಡದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋ ಮಾತುಗಳು ಕೇಳಿಬರುತ್ತಿವೆ.

ವಿಮಾನಗಳಿಗ್ಯಾಕಿಲ್ಲ ತಡೆ ?
ದೇಶಕ್ಕೆ ಕೊರೊನಾ ಮಹಾಮಾರಿ ಆಗಮನವಾಗಿರೋದೆ ವಿದೇಶಗಳಿಂದ. ವಿಮಾನ ನಿಲ್ದಾಣಗಳ ಮೂಲಕವೇ ಕೊರೊನಾ ಸೋಂಕು ದೇಶವನ್ನು ವ್ಯಾಪಿಸಿದೆ. ಆದರೆ ಬೆಂಗಳೂರು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಇಂದಿಗೂ ವಿದೇಶಿಯರು ತಾಯ್ನಾಡಿಗೆ ಮರಳುತ್ತಿದ್ದಾರೆ. ಹೀಗೆ ವಾಪಾಸಾಗುತ್ತಿರೋ ಬಹುತೇಕರು ಕೊರೊನಾ ಪೀಡಿತರಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದ್ದರೂ ಕೂಡ ಸರಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಕೇರಳಿಗರು ಹೆಚ್ಚಿನ ಸಂಖ್ಯೆಯಲ್ಲಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ತಾಯ್ನಾಡಿಗೆ ಮರಳುತ್ತಿದ್ದಾರೆ. ವಿಮಾನ ನಿಲ್ದಾಣಗಳಿಂದಲೇ ಸೋಂಕು ಹರಡುತ್ತಿದ್ದರು ರಾಜ್ಯ ಸರಕಾರ ಮಾತ್ರ ಗಾಢನಿದ್ದೆಯಿಂದ ಎದ್ದೇಳುತ್ತಿಲ್ಲ.

ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 75 ದಾಟಿದೆ. ಅದ್ರಲ್ಲೂ ಕರ್ನಾಟಕದ ಗಡಿಜಿಲ್ಲೆ ಕಾಸರಗೋಡಿನಲ್ಲಿ ದಿನಕ್ಕೆ 5 ಮಂದಿ ಕೊರೊನಾ ಪೀಡಿತರಾಗುತ್ತಿದ್ದಾರೆ. ಮಾತ್ರವಲ್ಲ ಮೈಸೂರು, ಕೊಡಗು ಜಿಲ್ಲೆಗಳಲ್ಲಿಯೂ ಕೇರಳ ವ್ಯಾಪಿಸಿಕೊಂಡಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಮೈಸೂರು ಹಾಗೂ ಕೊಡಗು ಜಿಲ್ಲೆಯಾದ್ಯಂತ ಲಾಕ್ ಡೌನ್ ಜಾರಿ ಮಾಡಲಾಗಿದೆ. ಆದರೆ ಸರಕಾರಿ ಬಸ್ ಸೇವೆ ಸಂಪೂರ್ಣವಾಗಿ ಬಂದ್ ಆಗಿದ್ದರು ಕೂಡ, ಖಾಸಗಿ ವಾಹನಗಳ ಓಡಾಟ ನಡೆಯುತ್ತಲೇ ಇದೆ.

ಮೈಸೂರು, ಕೊಡಗು, ಮಂಗಳೂರಲ್ಲಿ ಈಗಾಗಲೇ ಕೊರೊನಾ ಮಹಾಮಾರಿಗೆ ತಲಾ ಓರ್ವರು ತುತ್ತಾಗಿದ್ದಾರೆ. ಇನ್ನಷ್ಟು ಮಂದಿ ಕೊರೊನಾ ಮಾರಿಗೆ ತುತ್ತಾಗೋ ಮುನ್ನವೇ ರಾಜ್ಯ ಸರಕಾರ ಎಚ್ಚೆತ್ತು ಕಂಪ್ಲೀಟ್ ಕರ್ನಾಟಕವನ್ನೇ ಲಾಕ್ ಡೌನ್ ಮಾಡಬೇಕೆಂಬ ಮಾತುಗಳು ಕೇಳಿಬರುತ್ತಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular