ಸ್ವತಃ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮರಾಠಿ ಭಾಷಿಗರನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹೇಳಿಕೆ ಮೂಲಕ ಗಡಿ ತಂಟೆಗೆ ಉತ್ತೇಜನ ನೀಡುತ್ತಿರುವ ಬೆನ್ನಲ್ಲೇ ಕಿಡಿಗೇಡಿಗಳ ಕೃತ್ಯ ಎಲ್ಲೇ ಮೀರಿದ್ದು, ಕರ್ನಾಟಕದ ಬಸ್ ಮೇಲೆ ಮರಾಠಿ ಬ್ಯಾನರ್ ಕಟ್ಟಿ ಉದ್ಧಟತನ ಮೆರೆದಿದ್ದಾರೆ.

ಮಹಾರಾಷ್ಟ್ರದ ಗಡಿ ಭಾಗಕ್ಕೆ ಸಂಚರಿಸುವ ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮೇಲೆ ಕಪ್ಪು ಬಣ್ಣದ ಮರಾಠಿ ಬರಹದ ಬ್ಯಾನರ್ ಕಟ್ಟಿರುವ ಸಂಗತಿ ಶುಕ್ರವಾರ ಬೆಳಕಿಗೆ ಬಂದಿದೆ.

ಬೆಳಗಾವಿ,ನಿಪ್ಪಾಣಿ,ಕಾರವಾರ ಸೇರಿ ಸಂಯುಕ್ತ ಮಹಾರಾಷ್ಟ್ರ ರಚನೆಯಾಗಲಿದೆ ಎಂಬರ್ಥದಲ್ಲಿ ಪೋಸ್ಟರ್ ಬರೆಯಲಾಗಿದ್ದು, ಇದನ್ನು ಬೆಳಗಾವಿ ಹುಬ್ಬಳ್ಳಿ ದಾವಣಗೆರೆ ಬಸ್ಸಿನ ಹಿಂಭಾಗದಲ್ಲಿ ಕಟ್ಟಲಾಗಿದೆ. ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ ಪುಣೆ ಹೆಸರನ್ನು ಪೋಸ್ಟರ್ ಹೊಂದಿದೆ.

ಕರ್ನಾಟಕದಿಂದ ಮಹಾರಾಷ್ಟ್ರದ ಕೆಲಭಾಗಗಳಿಗೆ ಪ್ರತಿನಿತ್ಯವೂ ಸಾವಿರಾರು ಬಸ್ ಗಳು ಸಂಚರಿಸುತ್ತವೆ. ಈ ಬಸ್ ಗಳಲ್ಲಿ ಈ ರೀತಿಯ ಪೋಸ್ಟರ್ ಗಳನ್ನು ಹಾಕಿ ಕನ್ನಡಿಗರನ್ನು ಕೆಣಕುವ ಪ್ರಯತ್ನ ನಡೆಯುತ್ತಿದೆ. ಚಾಲಕರು ಹಾಗೂ ನಿರ್ವಾಹಕರ ಗಮನಕ್ಕೆ ಬಾರದಂತೆ ಕೃತ್ಯ ಎಸಗಲಾಗುತ್ತಿದೆ.

ಬಳಿಕ ಈ ಬಸ್ ಗಳ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದ್ದು, ವೈರಲ್ ಆಗುತ್ತಿರುವ ಪೋಟೋಗಳು ಭಾಷಿಕರ ನಡುವಿನ ಸಾಮರಸ್ಯ ಕದಡುತ್ತಿದೆ.

ಕಳೆದ ಕೆಲದಿನಗಳಿಂದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮರಾಠಿ ಭಾಷಿಕರ ಪರವಾಗಿ ಮಾತನಾಡುತ್ತ ಮತ್ತೆ ಕನ್ನಡಿಗರನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದು, ಮರಾಠಿ ಭಾಷೆ ಮಾತನಾಡುವ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದು ಸೇರಿದಂತೆ ಹಲವು ವಿವಾದಾತ್ಮಕ ಹೇಳಿಕೆ ನೀಡಿದ್ದಲ್ಲದೇ, 50 ವರ್ಷದ ಹಿಂದಿನ ಸಾಕ್ಷ್ಯಚಿತ್ರ ರಿಲೀಸ್ ಮಾಡಿ ಗಡಿತಂಟೆ ಕೆಣಕಿದ್ದಾರೆ.