ರಾಜ್ಯದಲ್ಲಿ ಮತ್ತೆ ನಡೆಯುತ್ತಾ ಸಿಎಂ ಬದಲಾವಣೆ ಸರ್ಕಸ್….! ಕುತೂಹಲ ಮೂಡಿಸಿದೆ ಅತೃಪ್ತ ಶಾಸಕರ ದೆಹಲಿ ದೌಡು…!!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಗಿಂತ ಹೆಚ್ಚು ಸದ್ದು ಮಾಡಿದ್ದ ನಾಯಕತ್ವ ಬದಲಾವಣೆ ವಿವಾದ ತಣ್ಣಗಾಗಿದ್ದ ಬೆನ್ನಲ್ಲೇ, ಸಿಎಂ ಸ್ಥಾನದ ರೇಸ್ ನಲ್ಲಿದ್ದ ಅರವಿಂದ್ ದೀಢೀರ್ ದೆಹಲಿಗೆ ದೌಡಾಯಿಸಿದ್ದಾರೆ. ಈ ಬೆಳವಣಿಗೆ ಮತ್ತೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಶುಕ್ರವಾರವಷ್ಟೇ ನಾನೇ ಇನ್ನು ಎರಡು ವರ್ಷ ಸಿಎಂ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದ್ದರು. ಈ ಘೋಷಣೆ ಬೆನ್ನಲ್ಲೇ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಎಂದೇ ಬಿಂಬಿತವಾದ ಅರವಿಂದ್ ಬೆಲ್ಲದ ನಿನ್ನೆ ತಡರಾತ್ರಿ ದೆಹಲಿಗೆ ತೆರಳಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ನಿಶ್ಚಿತ ಎಂದು ಕೆಲವು ತಿಂಗಳಿನಿಂದ  ಶಾಸಕ ಬಸನಗೌಡ್ ಯತ್ನಾಳ ಹೇಳುತ್ತಲೇ ಬಂದಿದ್ದರು. ಇತ್ತೀಚಿಗೆ ಸಿಎಂ ಪುತ್ರ ವಿಜಯೇಂದ್ರ ದೆಹಲಿಗೆ ತೆರಳಿದ್ದು, ಈ ವೇಳೆಯೂ ಸಿಎಂ ಬದಲಾವಣೆ ನಿಶ್ಚಿತವಾಗಿದ್ದು, ಈ ಬಗ್ಗೆ ವರಿಷ್ಠರ ಮನವೊಲಿಸಲು ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ ಎನ್ನಲಾಗುತ್ತಿತ್ತು.

ಆದರೆ ಕೆಲದಿನಗಳ ಹಿಂದೆಯಷ್ಟೇ ಈ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ ಎಂದಿದ್ದ ಬಿಜೆಪಿ ಹೈಕಮಾಂಡ್ ನಾಯಕತ್ವ ಬದಲಾವಣೆಯ ಪ್ರಸ್ತಾಪವೇ ನಮ್ಮ ಮುಂದಿಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದಿತ್ತು. ಇದಕ್ಕೆ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಸಹ ಪುನರುಚ್ಛರಿಸಿ ಮೊಹರು ಹಾಕಿದ್ದರು.

ಇದರ ಬೆನ್ನಲ್ಲೇ ಶಾಸಕ ಅರವಿಂದ್ ಬೆಲ್ಲದ ದೆಹಲಿ ಪ್ರಯಾಣ ಕುತೂಹಲ ಮೂಡಿಸಿದೆ. ಮೂಲಗಳ ಮಾಹಿತಿ ಪ್ರಕಾರ  ಅರವಿಂದ್ ಬೆಲ್ಲದ ಬಿಎಸ್ವೈ ಸರ್ಕಾರದ ಹಗರಣಗಳು, ತಂದೆಯ ಹೆಸರಿನಲ್ಲಿ ಮಗ ನಡೆಸುತ್ತಿರುವ ದರ್ಬಾರು ಸೇರಿದಂತೆ ಬಿಎಸ್ವೈ ವಿರುದ್ಧ ಹಲವು ದಾಖಲೆಯನ್ನು ಕೊಂಡೊಯ್ದಿದ್ದಾರಂತೆ. ‘ಅಷ್ಟೇ ಅಲ್ಲದೇ ಸಿಎಂ ಬದಲಾವಣೆಗೆ ಒಲವು ಹೊಂದಿರುವ ಶಾಸಕರ ಪ್ರತಿನಿಧಿಯಾಗಿಯೂ ದೆಹಲಿಗೆ ಹೋಗಿದ್ದು, ಹೈಕಮಾಂಡ್ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಈ ವಿಚಾರಗಳನ್ನು ಮನವರಿಕೆ ಮಾಡಿಸಿ ಸಿಎಂ ಬದಲಾವಣೆಗೆ  ಬೇಡಿಕೆ ಇಡಲಿದ್ದಾರೆ ಎನ್ನಲಾಗುತ್ತಿದೆ.

ಆದರೆ ತಮ್ಮ ದೆಹಲಿ ಭೇಟಿ ವೈಯ್ತಕಿಕ ಸಂಗತಿಯಾಗಿದ್ದು, ಇದಕ್ಕೂ ರಾಜಕೀಯಕ್ಕೂ ಯಾವುದೇ ನಂಟಿಲ್ಲ ಎಂದು ಅರವಿಂದ್ ಬೆಲ್ಲದ ಮಾಧ್ಯಮಗಳಿಗೆ ಹೇಳಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಅರವಿಂದ್ ಬೆಲ್ಲದ ದೆಹಲಿ ಭೇಟಿ ಮತ್ತಷ್ಟು ಚರ್ಚೆಯನ್ನು ಹುಟ್ಟುಹಾಕಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆ ವಿಚಾರ ಮುನ್ನಲೆಗೆ ಬಂದಿದೆ.

Comments are closed.