ಬೆಂಗಳೂರು: ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬಂದಿದ್ದು, ಬುಧವಾರ ಮಧ್ಯಾಹ್ನ ಪ್ರಮಾಣ ವಚನ ನಡೆಯಲಿದೆ. ಆದರೆ ಅಂತೂ ಇಂತೂ ಹುಡುಕಿ ಹುಡುಕಿ ಸಂಪುಟ ವಿಸ್ತರಣೆಗೆ ಹುಡುಕಿದ ಮುಹೂರ್ತದ ಬಗ್ಗೆ ಆಸ್ತಿಕರಲ್ಲಿ ಅಪಸ್ವರ ಎದ್ದಿದ್ದು, ಅಮಾವಾಸ್ಯೆ ದಿನ ನಡೆದ ಸಂಪುಟ ವಿಸ್ತರಣೆ ಅಂತಃಕಲಹ ಹಾಗೂ ಸರ್ಕಾರದ ಭವಿಷ್ಯಕ್ಕೆ ಮಾರಕ ಎನ್ನಲಾಗುತ್ತಿದೆ.

ಇಂದು ಸಂಕ್ರಾಂತಿ ಅಮಾವಾಸ್ಯೆ. ಸಾಮಾನ್ಯವಾಗಿ ಒಳ್ಳೆಯ ದಿನಗಳನ್ನು ಅಮಾವಾಸ್ಯೆಯಂದು ಮಾಡೋದಿಲ್ಲ. ಇದು ಆಸ್ತಿಕರ ವಾಡಿಕೆ. ಆದರೆ ಅಳೆದು-ಸುರಿದು ತೂಗಿ ನಿಶ್ಚಯವಾದ ಸಚಿವ ಸಂಪುಟ ವಿಸ್ತರಣೆ ಇಂದು ನಡೆಯಲಿದ್ದು,ಪ್ರಮಾಣ ವಚನಕ್ಕೂ ಮಧ್ಯಾಹ್ನದ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಆದರೆ ಈ ದಿನ ಹಾಗೂ ಪ್ರಮಾಣವಚನದ ಮುಹೂರ್ತ ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ ಹಾಗೂ ಸಂಪುಟಕ್ಕೆ ಶ್ರೇಯಸ್ಕರವಲ್ಲ ಎಂದು ಜ್ಯೋತಿಷ್ಯಿಗಳು ಅಭಿಪ್ರಾಯಿಸಿದ್ದಾರೆ.

ಬುಧವಾರ ಮಧ್ಯಾಹ್ನ 3.30 ಕ್ಕೆ ವೃಷಭ ಲಗ್ನವಿದ್ದು, ಲಗ್ನಕ್ಕೆ ಅಷ್ಠಮ ರವಿ, ಮಂಗಳ ದೋಷವಿದೆ. ಅಮಾವಾಸ್ಯೆ ಗುರು ದೃಷ್ಟಿ ಇದ್ದರೂ ಗುರುವಿಗೆ ಬಲವಿಲ್ಲ. ಹೀಗಾಗಿ ಈ ಮುಹೂರ್ತದಲ್ಲಿ ಪ್ರಮಾಣವಚನ ಸ್ವೀಕಾರದಿಂದ ನೇತಾರರಿಗೆ ಅಶುಭ, ಭಿನ್ನಮತ ಹಾಗೂ ಕಲಹಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದು ವೈದಿಕ ಜ್ಯೋತಿಷಿ ಡಾ.ಬಸವರಾಜ್ ಗುರೂಜಿ ಅಭಿಪ್ರಾಯಿಸಿದ್ದಾರೆ.

ಆದರೆ ಸದಾ ದೇವರು-ದಿಂಡಿರನ್ನು ನಂಬಿ, ದೇವಾಲಯಗಳಿಗೆ ಪೂಜೆ ಸಲ್ಲಿಸಿ ಹೋಮಹವನದಲ್ಲಿ ಪಾಲ್ಗೊಳ್ಳುವ ಸಿಎಂ ಬಿಎಸ್ವೈ ಯಾಕೆ ಅಮಾವಾಸ್ಯೆಯಂದು ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್ ಮಾಡಿದರು ಅನ್ನೋದು ಬಿಜೆಪಿಗರ ಅಚ್ಚರಿಗೆ ಕಾರಣವಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ನಡೆಯುತ್ತಿರುವ ಸಂಪುಟ ವಿಸ್ತರಣೆಯ ಚರ್ಚೆ, ಯಾರು ಇನ್ ಮತ್ತು ಔಟ್ ಎಂಬ ಲೆಕ್ಕಾಚಾರದಿಂದ ಬಿಜೆಪಿ ಹೈಕಮಾಂಡ್ ಬೇಸತ್ತಿದ್ದು, ಆದಷ್ಟು ಬೇಗ ಈ ಗಾಸಿಪ್ ಗಳಿಗೆ ತೆರೆ ಎಳೆಯಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ಸಂಪುಟ ವಿಸ್ತರಣೆ ಮುಗಿಸುವಂತೆ ಸಿಎಂಗೆ ಸೂಚನೆ ನೀಡಿದ್ದು, ಹೀಗಾಗಿ ತರಾತುರಿಯಲ್ಲಿ ಬಿಎಸ್ವೈ ತಮ್ಮ ಮೇಲಿರುವ ಜವಾಬ್ದಾರಿ ಮುಗಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಜ್ಯೋತಿಷ್ಯಿಗಳ ಹೇಳಿಕೆಯೂ,ಅಮಾವಾಸ್ಯೆ ಪ್ರಭಾವವೋ ಒಟ್ಟಿನಲ್ಲಿ ಸಂಪುಟ ವಿಸ್ತರಣೆ ಪಟ್ಟಿ ಫೈನಲ್ ಆಗುತ್ತಿದ್ದಂತೆ ಬಿಜೆಪಿಯ ವಲಸಿಗರು ಹಾಗೂ ಮೂಲನಿವಾಸಿಗಳಲ್ಲಿ ಫೈಟ್ ಶುರುವಾಗಿದ್ದು, ಎಲ್ಲಿಗೆ ಹೋಗಿ ತಲುಪುತ್ತೆ ಕಾದು ನೋಡಬೇಕಿದೆ.