ಬೆಂಗಳೂರು: ದೀಪಾವಳಿ ಸಡಗರದಲ್ಲಿರೋ ರಾಜ್ಯದ ಜನರಿಗೆ ರಾಜಕೀಯ ಮೇಲಾಟ ಪುಕ್ಸಟ್ಟೆ ಮನರಂಜನೆ ಒದಗಿಸುತ್ತಿದ್ದು, ಎರಡಕ್ಕೆರಡು ಬೈ ಎಲೆಕ್ಷನ್ ಗೆದ್ದಿರೋ ಸಿಎಂ ಬಿಎಸ್ವೈಗೆ ಇದೀಗ ಸಂಪುಟ ವಿಸ್ತರಣೆಯ ಸಂಕಟ ಎದುರಾಗಿದೆ.

ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ 7 ಸಚಿವ ಸ್ಥಾನಕ್ಕೆ ಒಂದು ಡಜನ್ ಗೂ ಅಧಿಕ ಶಾಸಕರು ಆಕಾಂಕ್ಷಿಗಳಾಗಿದ್ದು, ಅಲ್ಲಲ್ಲಿ ಸಭೆ, ಡಿನ್ನರ್, ಲಂಚ್ ನಡೆಸಿ ಸಿಎಂ ಮೇಲೆ ಒತ್ತಡ ಹೇರುವ ತಂತ್ರ ಆರಂಭಿಸಿದ್ದಾರೆ.

ಈ ಹಿಂದೆ ಸಚಿವರಾಗಿದ್ದ ಮುರುಗೇಶ್ ನಿರಾಣಿಯಿಂದ ಆರಂಭಿಸಿ, ಸಿಎಂ ಬಿಎಸ್ವೈ ದತ್ತುಪುತ್ರ ಎಂದೇ ಕರೆಯಿಸಿಕೊಳ್ಳೋ ರೇಣುಕಾಚಾರ್ಯ, ಕೈಪಾಳಯದಿಂದ ಬಂದು ಕಮಲದ ಜೊತೆ ನಿಂತು ಸರ್ಕಾರ ರಚನೆಗೆ ಕಾರಣವಾದ ಶಾಸಕರುಗಳು ಸೇರಿದಂತೆ 15 ಕ್ಕೂ ಹೆಚ್ಚು ಆಕಾಂಕ್ಷಿಗಳು ಸರತಿ ಸಾಲಿನಲ್ಲಿ ಮಂತ್ರಿ ಪದವಿಗಾಗಿ ಕಾದಿದ್ದಾರೆ.

ಮೊನ್ನೆಯಷ್ಟೇ ಕಾಂಗ್ರೆಸ್ ವಿರುದ್ಧ ದಾಖಲೆಯ ಗೆಲುವು ಸಾಧಿಸಿದ ಮುನಿರತ್ನ ಸಚಿವರಾಗಲು ತುದಿಗಾಲಿನಲ್ಲಿ ನಿಂತಿದ್ದು, ಎಂಟಿಬಿ ನಾಗರಾಜ್ ನಾನು ಸಚಿವರಾಗಿಯೇ ಸಿದ್ಧ ಎಂದು ಶಪಥ ಗೈಯ್ದಿದ್ದಾರೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಬಿಎಸ್ವೈ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸೋ ಸಾಧ್ಯತೆಗಳೇ ದಟ್ಟವಾಗಿದೆ.

ಇನ್ನೊಂದೆಡೆ ಕೆಲವರನ್ನು ಸಂಪುಟದಿಂದ ಕೈಬಿಟ್ಟು ಹಲವರನ್ನು ಸೇರಿಸಿಕೊಳ್ಳಲಾಗುತ್ತದೆ ಎಂಬ ಮಾತು ಕೇಳಿಬಂದಿದ್ದು, ಹೀಗಾಗಿ ಇದು ಸಚಿವ ಸಂಪುಟ ವಿಸ್ತರಣೆಯೂ, ಪುನರಚನೆಯೋ ಎಂಬ ಅನುಮಾನವೂ ಸೃಷ್ಟಿಯಾಗಿದೆ. ರಮೇಶ್ ಜಾರಕೊಹೊಳಿ ನಿವಾಸದಲ್ಲಿ ಸಭೆ ಕೂಡ ನಡೆದಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳೆಲ್ಲ ಪಾಲ್ಗೊಂಡಿದ್ದರು ಎನ್ನಲಾಗುತ್ತಿದೆ.

ಆದರೆ ಹೈಕಮಾಂಡ್ ಕರ್ನಾಟಕದ ಸಂಪುಟ ವಿಸ್ತರಣೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಹೀಗಾಗಿ ದೆಹಲಿಗೆ ಧಾವಿಸೋ ಸಿಎಂ ಬಿಎಸ್ವೈ ಆತುರಕ್ಕೆ ಆಗಾಗ ಬ್ರೇಕ್ ಹಾಕುತ್ತಲೇ ಇದ್ದು, ಬಿಹಾರ ಸರ್ಕಾರ ರಚನೆಯ ಬಳಿಕವಷ್ಟೇ ದೆಹಲಿಗೆ ಆಗಮಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ಸಿಎಂ ಬಿಎಸ್ವೈ ಸಧ್ಯ ಸಚಿವ ಸ್ಥಾನಾಂಕ್ಷಿತರನ್ನು ಸಮಾಧಾನಿಸುವ ಪ್ರಯತ್ನದಲ್ಲಿದ್ದು, ಸಧ್ಯ ದೀಪಾವಳಿಗೆ ಸಚಿವರಾಗೋ ಶಾಸಕರ ಕನಸು ಕನಸಾಗೇ ಉಳಿದಿದೆ. ಈ ಮಧ್ಯೆ ಸಚಿವ ಸ್ಥಾನಕ್ಕೆ,ಜಾತಿ, ಧರ್ಮ,ಪ್ರಾದೇಶಿಕತೆ, ಆರ್.ಎಸ್.ಎಸ್. ಹಿನ್ನೆಲೆ, ಸರ್ಕಾರ ರಚನೆಗೆ ಕಾರಣವಾಗಿದ್ದು, ಹೀಗೆ ನಾನಾ ಅರ್ಹತೆಗಳು ಮಾನದಂಡವಾಗುತ್ತಿದ್ದು, ಯಾರಿಗೆ ಸ್ಥಾನ ಸಿಕ್ಕರೂ ಅಸಮಧಾನ ತಪ್ಪಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.