ಬೆಂಗಳೂರು: ಒಂದೆಡೆ ಸಚಿವ ಸಂಪುಟ ಸಂಕಟ, ಇನ್ನೊಂದೆಡೆ ಹೈಕಮಾಂಡ್ ಕೆಂಗಣ್ಣು,ಇನ್ನೊಂದೆಡೆ ಅಧಿಕಾರಕ್ಕೆ ಬರಲು ಕಾರಣವಾದ ಬಂಡಾಯ ಶಾಸಕರ ಒತ್ತಡ ಈ ಎಲ್ಲ ಸಂಕಷ್ಟಗಳಿಂದ ಪಾರಾಗಲು ಸಿಎಂ ಬಿಎಸ್ವೈ ಮತ್ತೊಮ್ಮೆ ದೇವರ ಮೊರೆ ಹೋಗಿದ್ದಾರೆ.

ಇಂದು ಸಿಎಂ ಬಿಎಸ್ವೈ ಧವಳಗಿರಿ ನಿವಾಸದಲ್ಲಿ ಪೂಜೆ-ಹೋಮ-ಹವನ ಕಾರ್ಯಗಳು ನಡೆದಿದ್ದು, ಇದರಲ್ಲಿ ಸಿಎಂ ಬಿಎಸ್ವೈ ಖುದ್ದು ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲ ಈ ಧಾರ್ಮಿಕ ಕಾರ್ಯಕ್ಕೆ ಗೌರಿಗದ್ದೆಯ ವಿನಯ್ ಗುರೂಜಿಯನ್ನು ಕರೆಸಲಾಗಿದೆ.

ಸಿಎಂ ಬಿಎಸ್ವೈ ಹಾಗೂ ವಿನಯ್ ಗುರೂಜಿ ಧೀಡೀರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವಿನಯ್ ಗುರೂಜಿ, ಸಿಎಂ ಬಿಎಸ್ವೈ ಗೆ ದೈವ ಬೆಂಬಲವಿದೆ.ಅವರು ಸಿಎಂ ಆಗಿ ಮುಂದುವರೆಯುತ್ತಾರೆ ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ಸಿಎಂ ಗುರೂಜಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ ಸಿಎಂ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಕಳವಳಕ್ಕಿಡಾಗಿದ್ದು, ಗುರೂಜಿಯ ಮಾರ್ಗದರ್ಶನ ಪಡೆಯಲು ಕರೆಸಿದ್ದಾರೆ ಎನ್ನಲಾಗಿದೆ.

ಇತ್ತೀಚಿಗೆ ಪ್ರಚಲಿತಕ್ಕೆ ಬಂದ ವಿನಯ ಗುರೂಜಿ ಅವಧೂತರೆಂದು ಪ್ರಸಿದ್ಧಿ ಪಡೆದಿದ್ದು ಮಾಜಿಸಿಎಂ ಎಸ್.ಎಂ.ಕೆ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಎಸ್.ಎಂ.ಕೆ ಅಳಿಯ ಸಿದ್ಧಾರ್ಥ್ ನಾಪತ್ತೆ ಸಂದರ್ಭದಲ್ಲಿ ಭವಿಷ್ಯ ನುಡಿದು ಅಚ್ಚರಿ ಮೂಡಿಸಿದ್ದರು. ಇತ್ತೀಚಿಗೆ ನಡೆದ ಎಸ್.ಎಂ.ಕೆ ಮೊಮ್ಮಗ ಹಾಗೂ ಡಿಕೆಶಿ ಪುತ್ರಿ ಐಶ್ವರ್ಯ ಎಂಗೇಜಮೆಂಟ್ ನಲ್ಲೂ ಪಾಲ್ಗೊಂಡಿದ್ದು, ರಾಜಕೀಯ ನಾಯಕರು ವಿನಯ್ ಗುರೂಜಿ ಮೊರೆ ಹೋಗುವ ಪ್ರವೃತ್ತಿ ನಿಧಾನಕ್ಕೆ ಹೆಚ್ಚುತ್ತಿದೆ.