ಹನಿಮೂನ್ ಬದಿಗಿಟ್ಟು ಸಮುದ್ರಕ್ಕಿಳಿದ ನವದಂಪತಿ….! ಕಪಲ್ಸ್ ಕಾರ್ಯಕ್ಕೆ ಜನರ ಶ್ಲಾಘನೆ…!!

ಉಡುಪಿ: ಜನರು ತಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳೋಕೆ ಕೆಲಸದವರನ್ನು ಅವಲಂಬಿಸೋ ಕಾಲದಲ್ಲಿ ಇಲ್ಲೊಂದು ಸುಶಿಕ್ಷಿತ ನವದಂಪತಿ ಹನಿಮೂನ್ ಪ್ಲ್ಯಾನ್ ಗೂ ಮೊದಲು ಸಮುದ್ರ ಸ್ವಚ್ಛತೆ ಅಭಿಯಾನ ನಡೆಸಿ ಗಮನ ಸೆಳೆದಿದ್ದಾರೆ.

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಅನುದೀಪ್ ಹೆಗಡೆ ಹಾಗೂ ಮಿನುಷಾ ಕಾಂಚನ್ ದಂಪತಿ ಇಂತಹದೊಂದು ವಿಭಿನ್ನ ಕೆಲಸದ ಮೂಲಕ ಹೀಗೂ ಮದುವೆಯನ್ನು ಸ್ಮರಣೀಯ ಎನ್ನಿಸಬಹುದು ಎಂಬ ಮಾದರಿಯನ್ನು ತೋರಿದ್ದಾರೆ.

ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಯಲ್ಲಿರುವ ಅನುದೀಪ್ ಹಾಗೂ ಫಾರ್ಮಾಸ್ಯುಟಿಕಲ್ ಕಂಪನಿ ಉದ್ಯೋಗಿ ಮಿನುಷಾ ನವೆಂಬರ್ 18 ರಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು.

ಈ ಮದುವೆಯನ್ನು ತುಂಬಾ ಸ್ಪೆಶಲ್ ಹಾಗೂ ಸದಾ ಸ್ಮರಣೀಯ ಮಾಡೋ ಉದ್ದೇಶದಿಂದ ಹನಿಮೂನ್ ಗೆ ಹೋಗೋದಿಕ್ಕು ಮೊದಲು ತಮ್ಮ ಹುಟ್ಟೂರಿನ ಸಮುದ್ರ ತೀರವನ್ನು ಕಸಮುಕ್ತಗೊಳಿಸೋ ಪಣ ತೊಟ್ಟರು. ಫಲವಾಗಿ ನ.೨೭ ರಿಂದ ಪ್ರತಿದಿನ ಎರಡು ಗಂಟೆಗಳ ಕಾಲ ಬೀಚ್ ನಲ್ಲಿ ಬಿದ್ದ ಕಸಗಳನ್ನು ಹೆಕ್ಕಿ ಸಂಗ್ರಹಿಸಿ ವಿಲೇವಾರಿ ಮಾಡಿದ್ದಾರೆ.

ಬರೋಬ್ಬರಿ 500 ಕೆಜಿ ತ್ಯಾಜ್ಯ ಸಂಗ್ರಹಣೆಯಾಗಿದ್ದು ಈ ಕಸ ಹೆಕ್ಕುವ ಮತ್ತು ವಿಲೇವಾರಿ ಕಾರ್ಯದಲ್ಲಿ ನವದಂಪತಿಯ ಜೊತೆ ಸ್ಥಳೀಯರು ಹಾಗೂ ಕೆಲ ಸಂಘಟನೆಗಳು ಕೂಡ ಕೈಜೋಡಿಸಿದ್ದು ಇವರ ಉತ್ಸಾಹ ಹೆಚ್ಚಿಸಿದೆ.

7 ದಿನದಲ್ಲಿ 700 ಮೀಟರ್ ಸಮುದ್ರ ತೀರ ಸ್ವಚ್ಛತೆ ಪೊರೈಸಿರುವ ಅನುದೀಪ್ ಹಾಗೂ ಮಿನುಷಾ ಮದುವೆಯಾದ ಸಂದರ್ಭದಲ್ಲಿ ಒಂದು ಒಳ್ಳೆಯ ಕೆಲಸವನ್ನು ಪೊರೈಸಿದ ತೃಪ್ತಿ ನಮಗಿದೆ ಅಂತಿದ್ದಾರೆ.

ಮದುವೆ ಮುನ್ನ ಸಾಮಾನ್ಯವಾಗಿ ವಧು-ವರರಯ ಹನಿಮೂನ್ ಪ್ಲ್ಯಾನ್ ಮಾಡಿ ಕನಸು ಕಾಣೋ ಹೊತ್ತಲ್ಲಿ ಈ ಜೋಡಿ ಪರಿಸರ ರಕ್ಷಣೆಯ ಕೆಲಸವೊಂದಕ್ಕೆ ಚಿಂತನೆ ನಡೆಸಿ ಯಶಸ್ವಿಗೊಳಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Comments are closed.