ರಾಜಕಾರಣದಲ್ಲಿ ಯಾರೂ ಶಾಶ್ವತವಾದ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಅನ್ನೋ ದು ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ನಲ್ಲೇ ವಿರುದ್ಧ ಧ್ರುವಗಳಂತಿದ್ದ ಡಿಕೆಶಿ ಹಾಗೂ ಸಿದ್ಧು ಪರಸ್ಪರ ಭೇಟಿ ಮಾಡಿದ್ದಲ್ಲದೇ ಡಿಕೆಶಿ ಸಿದ್ದು ಕಾಲಿಗೆ ಬಿದ್ದು ಅಚ್ಚರಿ ಮೂಡಿಸಿದ್ದಾರೆ.

ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಮಾಜಿ ಸಚಿವ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದೇ ಪಕ್ಷದಲ್ಲಿ ಇದ್ದರೂ ಪರಸ್ಪರ ಸದಾ ಒಂದು ಅಂತರವನ್ನು ಕಾಯ್ದುಕೊಂಡೇ ಬಂದಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಮುಖ್ಯಮಂತ್ರಿಯಾಗೋದು ಸಿದ್ದರಾಮಯ್ಯ ಕನಸಾದರೇ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಆ ಹಕ್ಕಿನಲ್ಲೇ ಸಿಎಂ ಸ್ಥಾನಕ್ಕೇರೋದು ಡಿಕೆಶಿ ಹಂಬಲ.

ಇಬ್ಬರ ಕನಸು ಸಿಎಂ ಕುರ್ಚಿಯೇ ಆಗಿರೋದರಿಂದ ಆರಂಭದಿಂದಲೂ ಸಿದ್ಧು ಡಿಕೆಶಿ ವಿಚಾರಗಳಲ್ಲಿ ದಿವ್ಯ ಮೌನ ವಹಿಸುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲ ಡಿಕೆಶಿ ಅಕ್ರಮ,ಜೈಲಿಗೆ ಹೋದ ಸಂದರ್ಭದಲ್ಲೂ ತಟಸ್ಥವಾಗಿ ಉಳಿದಿದ್ದರು.
ಡಿಕೆಶಿ ಬೆಂಬಲಿಸಿ ನಡೆದ ಮೆರವಣಿಗೆಯಲ್ಲೂ ಪಾಲ್ಗೊಂಡಿರಲಿಲ್ಲ. ಇಂತಿಪ್ಪ ಸಿದ್ದರಾಮಯ್ಯ ನವರ ಡಿಕೆಶಿಯೂ ಆರೋಗ್ಯಕರ ಅಂತರ ಪಾಲಿಸುತ್ತಲೇ ಬಂದಿದ್ದಾರೆ.

ಆದರೆ ಕಳೆದ ಒಂದು ವಾರದಲ್ಲಿ ಈ ನಡುವೆ ಅಂತರವಿರಲಿ ಕಾನ್ಸೆಪ್ಟ್ ನ್ನು ಸಿದ್ದರಾಮಯ್ಯ ಹಾಗೂ ಡಿಕೆಶಿ ಕೈಬಿಟ್ಟಂತಿದೆ. ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ಮುನಿಸಿಕೊಂಡ ಸಿದ್ಧು ಮನವೊಲಿಸಲು ಖುದ್ದು ಸಿದ್ದರಾಮಯ್ಯ ನವರ ಮನೆಗೆ ಡಿಕೆಶಿಯೇ ತೆರಳಿದ್ದು ಇದಕ್ಕೆ ಸಾಕ್ಷಿ ಒದಗಿಸಿದೆ.

ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾದ ಜನಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಕ್ಷದ ಕಚೇರಿಗೆ ಬಂದ ಸಿದ್ದರಾಮಯ್ಯ ನವರನ್ನು ಸ್ವಾಗತಿಸಿದ ಡಿಕೆಶಿ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸದಾ ಮುಸುಕಿನಲ್ಲೇ ಗುದ್ದಾಡುವ ಡಿಕೆಶಿ ಇಷ್ಟೊಂದು ಮೃದುವಾಗಿ ಸಿದ್ಧು ಆಶೀರ್ವಾದ ಬಯಸಿದ್ದು ಕೈಕಾರ್ಯಕರ್ತರ ಅಚ್ಚರಿಗೆ ಕಾರಣವಾಗಿದ್ದು ಕನಕಪುರ ಬಂಡೆ ಕರಗುತ್ತಿರೋದ್ಯಾಕೆ ಅನ್ನೋ ಪ್ರಶ್ನೆ ಸೃಷ್ಟಿಯಾಗಿದೆ.