ಸಿನಿಮಾ ಹಿನ್ನೆಲೆಯಿಂದಲೇ ಬಂದು ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದರೂ ಅವಕಾಶಗಳ ಕೊರತೆಯಿಂದ ನಾಲ್ಕೈದು ವರ್ಷಗಳಿಂದ ತೆರೆಯ ಹಿಂದೆಯೇ ಉಳಿದ ನಟಿಮಣಿ ಚಿತ್ರರಂಗಕ್ಕೆ ವಿದಾಯ ಕೋರಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಕಾರ್ತಿಕಾ ಗುಡ್ ಬೈ ಹೇಳಿದ್ದು, ಉದ್ಯಮಿಯಾಗಿ ಉಳಿಯುವ ಕನಸು ಹಂಚಿಕೊಂಡಿದ್ದಾರೆ.

ತಮಿಳಿನ ಖ್ಯಾತ ನಟಿ ರಾಧಿಕಾ ಪುತ್ರಿಯಾದ ಕಾರ್ತಿಕಾ ಮೊದಲಿನಿಂದಲೂ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರೂ ಆಕೆಯನ್ನು ಚಿತ್ರರಂಗ ಸೆಳೆದಿತ್ತು. ಭಾರಿ ಬಜೆಟ್ ನ ಸಿನಿಮಾದಲ್ಲಿ ಕೆರಿಯರ್ ಶುರು ಮಾಡಿದ ಕಾರ್ತೀಕ್ ನಾಯರ್ ಮೊದಲ ಚಿತ್ರದಲ್ಲೇ ನಾಗಚೈತನ್ಯ ಗೆ ಜೊತೆಯಾದರು. ಜೋಷ್ ಚಿತ್ರ ಸಾಕಷ್ಟು ಯಶಸ್ಸು ಕೂಡ ಪಡೆಯಿತು.

ಬಳಿಕ ತಮಿಳಿನ ಕೋ ದಲ್ಲಿ ಅವಕಾಶ ಪಡೆದುಕೊಂಡ ಕಾರ್ತೀಕಾ ಅಲ್ಲಿ ಕೂಡ ಪ್ರೇಕ್ಷಕರ ಮನಸ್ಸು ಗೆದ್ದರು. ಬಳಿಕ ತೆಲುಗಿಗೆ ಹಾರಿದ ಕಾರ್ತಿಕಾ ಅಲ್ಲಿ ಜ್ಯೂನಿಯರ್ ಎನ್ಟಿಆರ್ ಜೊತೆ ದಮ್ಮು ಚಿತ್ರದಲ್ಲಿ ನಟಿಸಿ ಸೈ ಎನ್ನಿಸಿಕೊಂಡರು.

ಮುಮ್ಮುಟ್ಟಿ ಜೊತೆ ಮಲೆಯಾಳಂ ಚಿತ್ರದಲ್ಲೂ ನಟಿಸಿದ್ದ ಕಾರ್ತಿಕಾ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಬೃಂದಾವನ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಇಷ್ಟೆಲ್ಲಾ ಸಿನಿಮಾಗಳ ನಂತರವೂ ಕಾರ್ತಿಕಾ ಸಿನಿಮಾರಂಗದಲ್ಲಿ ಭವಿಷ್ಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

2016 ರಲ್ಲಿ ವಾ ದಿಲ್ ತಮಿಳು ಚಿತ್ರದ ಬಳಿಕ ಕಾರ್ತಿಕಾ ಯಾವ ಚಿತ್ರದಲ್ಲೂ ನಟಿಸಿಲ್ಲ. ಅವಕಾಶಗಳಿಗಾಗಿ ಕಾದು ಸೋತ ಕಾರ್ತಿಕಾ ಇದೀಗ ಎಲ್ಲ ಭಾಷೆಯ ಚಿತ್ರರಂಗದಿಂದಲೂ ದೂರ ಉಳಿಯಲು ನಿರ್ಧರಿಸಿದ್ದು, ತಮ್ಮ ಹೊಟೇಲ್ ಉದ್ಯಮವನ್ನೇ ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿಕೊಂಡಿದ್ದಾರೆ.

ಯುಟಿಎಸ್ ಗ್ರೂಪ್ ಆಫ್ ಹೊಟೇಲ್ಸ್ ನ ಮುಖ್ಯಸ್ಥೆಯಾಗಿರುವ ಕಾರ್ತಿಕ ಬಣ್ಣದ ಲೋಕದ ಬಳಿಕ ಹೊಟೇಲ್ ಉದ್ಯಮದತ್ತ ಮುಖಮಾಡಿದ್ದು, ಅಲ್ಲಿ ಯಶಸ್ಸು ಪಡೆಯುವ ಪ್ರಯತ್ನದಲ್ಲಿದ್ದಾರೆ.