ಹುಬ್ಬಳ್ಳಿ : ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹದ ಆರೋಪದಡಿಯಲ್ಲಿ ಬಂಧಿತರಾಗಿದ್ದ ಮೂವರು ವಿದ್ಯಾರ್ಥಿಗಳನ್ನು ಹುಬ್ಬಳ್ಳಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ದೇಶದ್ರೋಹದಂತಹ ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಬಿಡುಗಡೆ ಮಾಡಿರೋ ಕ್ರಮದ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಭಜರಂಗದಳ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯ ಕೆಎಲ್ ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಶ್ಮೀರದ ಶೋಫಿಯಾನ ಜಿಲ್ಲೆಯ ಅಮಿರ್ ಮೊಹಿದ್ದೀನ್ ವಾನಿ, ಬಾಸೀತ್ ಆಸಿಫ್ ಸೋಫಿ ಹಾಗೂ ತಾಲಿಬ ಮಾಜಿದ್ ಎಂಬವರನ್ನು ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆಯ ಪೊಲೀಸರು ಬಂಧಿಸಿದ್ದರು. ಆದರೆ ಇಂದು ಪೊಲೀಸರು ಸೆಕ್ಷನ್ 169ರ ಅಡಿಯಲ್ಲಿ ಬಾಂಡ್ ಬರೆಯಿಸಿಕೊಂಡು, ಕರೆದಾಗೆಲ್ಲಾ ಠಾಣೆಗ ಬರುವಂತೆ ಸೂಚಿಸಿ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ್ದರು. ಪೊಲೀಸರ ಕ್ರಮದ ವಿರುದ್ದ ಹುಬ್ಬಳ್ಳಿಯಲ್ಲಿ ಬಾರೀ ವಿರೋಧ ವ್ಯಕ್ತವಾಗಿದೆ. ಪೊಲೀಸರ ಕ್ರಮವನ್ನು ಖಂಡಿಸಿ, ಭಜರಂಗದಳ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಗೋಕುಲ್ ರೋಡ್ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಗೋಕುಲ್ ರಸ್ತೆಯಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ಪೊಲೀಸರ ವಿರುದ್ದ ಘೋಷಣೆಗಳನ್ನು ಕೂಗಿದ್ದಾರೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಆಗ್ರಹಿಸಿದ್ದಾರೆ.