ಸಂಚಾರ ನಿಲ್ಲಿಸಿದ ಮಲೆನಾಡಿಗರ ನಾಡಿಮಿಡಿತ : ನಷ್ಟದ ಸುಳಿಗೆ ಏಷ್ಯಾದ ಮೊದಲ ಸಹಕಾರಿ ಸಾರಿಗೆ

0

ಚಿಕ್ಕಮಗಳೂರು : ಮಲೆನಾಡಿಗರ ಪಾಲಿಗೆ ನಾಡಿಮಿಡಿತವಾಗಿದ್ದ ಏಷ್ಯಾದ ಮೊದಲ ಸಹಕಾರ ಸಾರಿಗೆ ಸಂಸ್ಥೆ ಇದೀಗ ಸಂಚಾರ ನಿಲ್ಲಿಸಿದೆ. ಕಾರ್ಮಿಕರೇ ಮಾಲೀಕರಾಗಿ ಸಹಕಾರ ತತ್ವದ ಅಡಿಯಲ್ಲಿ ನಡೆದುಕೊಂಡು ಬರ್ತಿದ್ದ ಕೊಪ್ಪದ ಸಹಕಾರ ಸಾರಿಗೆ ನಷ್ಟದ ಸುಳಿಗೆ ಸಿಲುಕಿದೆ. ಸರಕಾರ ಸಹಕಾರವಿಲ್ಲದೇ ಸಂಚಾರ ನಿಲ್ಲಿಸಿರೋ ಸಹಕಾರ ಸಾರಿಗೆ ಸಂಸ್ಥೆಯಿನ್ನು ನೆನಪು ಮಾತ್ರ.

ಹೌದು, 90ರ ದಶಕದಲ್ಲಿ ಮಲೆನಾಡಿನ ಭಾಗಗಳಿಗೆ ಬಸ್ ಸಂಚಾರ ದುಸ್ಥರವಾಗಿತ್ತು. ಆ ಕಾಲದಲ್ಲಿ ಜನರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದ ಶಂಕರ್ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಸಿಬ್ಬಂಧಿಗಳು ವೇತನ ಏರಿಕೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಮುಷ್ಕರ ಹೂಡಿದ್ರು. ಸುಮಾರು 2 ತಿಂಗಳ ಕಾಲ ಮುಷ್ಕರವನ್ನು ಮುಗಿಸೋದಕ್ಕೆ ಮುಂದಾಗದೇ ಇದ್ದಾಗ, ಮಾಲೀಕರು ಸಂಸ್ಥೆಯನ್ನು ಮುಚ್ಚೋ ನಿರ್ಧಾರಕ್ಕೆ ಬಂದ್ರು. ನೌಕರರಿಗೆ ಪರಿಹಾರವನ್ನು ನೀಡಿ ಸಂಸ್ಥೆಗೆ ಶಾಶ್ವತವಾಗಿ ಬಾಗಿ ಹಾಕಿಯೇ ಬಿಟ್ಟರು. ಈ ವೇಳೆಯಲ್ಲಿ ಸುಮಾರು 123 ಸಿಬ್ಬಂಧಿಗಳು ತಮಗೆ ಸಿಕ್ಕಿದ 12 ಲಕ್ಷ ರೂಪಾಯಿಯಲ್ಲಿ ಸಾರಿಗೆ ಸಂಸ್ಥೆಯೊಂದನ್ನು ಆರಂಭಿಸೋದಕ್ಕೆ ಮುಂದಾದ್ರು.

ತಮಗೆ ಸಿಕ್ಕ ಪರಿಹಾರದ ಹಣದಲ್ಲಿ ಶಂಕರ್ ಟ್ರಾನ್ಸ್ ಪೋರ್ಟ್ ಕಂಪೆನಿಯ 6 ಬಸ್ಸುಗಳನ್ನು ಖರೀದಿ ಮಾಡಿದ್ರು. ಅದೇ ಬಸ್ಸುಗಳನ್ನು ಇಟ್ಟುಕೊಂಡು 1991ರಲ್ಲಿ ಸಹಕಾರ ಸಾರಿಗೆ ಅನ್ನೋ ಹೆಸರಲ್ಲಿ 123 ಸಿಬ್ಬಂಧಿಗಳು ಸಾರಿಗೆ ಸೇವೆ ನೀಡೋದಕ್ಕೆ ಮುಂದಾದ್ರು.

ಸಹಕಾರ ತತ್ವದ ಅಡಿಯಲ್ಲಿ ಸಂಸ್ಥೆಯನ್ನು ಸುಮಾರು 30 ವರ್ಷಗಳ ಕಾಲ ಯಶಸ್ವಿಯಾಗಿಯೇ ಮುನ್ನಡೆಸಿಕೊಂಡು ಬಂದಿದ್ದಾರೆ. 6 ಬಸ್ಸುಗಳಿಂದ ಆರಂಭಗೊಂಡ ಸಂಸ್ಥೆಯಿಂದು 75ಕ್ಕೂ ಅಧಿಕ ಬಸ್ಸುಹಳನ್ನು ಹೊಂದಿದೆ. ಸ್ವತಃ ಕಚೇರಿಯನ್ನು ಹೊಂದುವ ಮೂಲಕ ಗ್ರಾಮೀಣ ಭಾಗಕ್ಕೆ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.

1991ರ ಸುಮಾರಿಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಬಾಳೆಹೊನ್ನೂರು, ಜಯಪುರ, ಚಿಕ್ಕಮಗಳೂರು, ಹೊರನಾಡು, ಮೂಡಿಗೆರೆ, ತರಿಕೆರೆ ಮುಂತಾದ ಭಾಗದ ಜನರಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸೋದಕ್ಕೆ ಜನ್ಮತಾಳಿದ್ದು ಸಹಕಾರ ಸಾರಿಗೆ ಸಂಸ್ಥೆ. ಆರಂಭದಲ್ಲಿ ಕಾಫಿನಾಡಿನಲ್ಲಿ ಸಂಚರಿಸುತ್ತಿದ್ದ ಸಹಕಾರ ಸಾರಿಗೆ ಬಸ್ಸುಗಳು ಇದೀಗ ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ತನ್ನ ಸಂಚಾರ ವ್ಯಾಪ್ತಿಯನ್ನ ಹೆಚ್ಚಿಸಿಕೊಂಡಿದೆ.

ಬಸ್ ಸಂಚಾರಕ್ಕೆ ಪರದಾಡುತ್ತಿದ್ದ ಜನರು ಸಹಕಾರ ಸಾರಿಗೆ ಬಸ್ಸುಗಳು ಜನರ ನಾಡಿಮಿಡಿತವಾಗಿ ಹೋಗಿತ್ತು. ಮಾತ್ರವಲ್ಲ ನಿತ್ಯವೂ 10,000 ಅಧಿಕ ವಿದ್ಯಾರ್ಥಿಗಳು, 70 ಸಾವಿರಕ್ಕೂ ಅಧಿಕ ಜನಸಾಮಾನ್ಯರು ಇದೀಗ ಸಹಕಾರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚಾರ ಮಾಡುತ್ತಿದ್ದಾರೆ.

30 ವರ್ಷಗಳ ಕಾಲ ಸಹಕಾರ ತತ್ವದಡಿ ಯಶಸ್ವಿಯಾಗಿದ್ದ ಸಂಸ್ಥೆ ಏಷ್ಯಾದ ಮೊದಲ ಮಾದರಿ ಸಹಕಾರ ಸಂಸ್ಥೆ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಮಾತ್ರವಲ್ಲ ಸಹಕಾರ ಸಾರಿಗೆ ಸಂಸ್ಥೆಯ ಸಹಕಾರ ತತ್ವವನ್ನು ಜಪಾನ್ ದೇಶದ ಸಂಸ್ಥೆಯೂ ಅಳವಡಿಸಿಕೊಂಡಿತ್ತು.


ಆದ್ರೆ ಹೆಚ್ಚುತ್ತಿರೋ ಬಸ್ಸುಗಳ ಟ್ಯಾಕ್ಸ್, ಡಿಸೇಲ್ ಬೆಲೆ ಏರಿಕೆ ಹೀಗೆ ನಾನಾ ಕಾರಣಗಳಿಂದಾಗಿ ಸಂಸ್ಥೆ ಇಂದು ಸಂಕಷ್ಟದ ಸುಳಿಗೆ ಸಿಲುಕಿದೆ. ಹಲವು ವರ್ಷಗಳಿಂದಲೂ ಸಂಸ್ಥೆಯ ನೌಕರರಿಗೆ ವೇತನ ಏರಿಕೆ ಸೇರಿದಂತೆ ಯಾವುದೇ ಸೌಲಭ್ಯಗಳನ್ನೂ ನೀಡೋದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಸಂಸ್ಥೆಯ ನೆರವಿಗೆ ದಾವಿಸುವಂತೆ ರಾಜ್ಯ ಸರಕಾರದ ಮೊರೆ ಹೋಗಿದ್ದರು. ತೆರಿಗೆ ವಿನಾಯಿತಿ ನೀಡೋ ಭರವಸೆಯನ್ನು ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಸ್ಥೆಯ ನೆರವಿಗೆ ಧಾವಿಸಿಲ್ಲ. ಹೀಗಾಗಿ ಇಂದು ಸಂಸ್ಥೆ ತನ್ನ ಸಂಚಾರವನ್ನೇ ನಿಲ್ಲಿಸಿದೆ. ಸಾರಿಗೆ ಸಂಸ್ಥೆಯನ್ನೇ ಆಶ್ರಯಿಸಿದ್ದ ಪ್ರಯಾಣಿಕರು ಪರದಾಡುತ್ತಿದ್ರೆ, ಸಿಬ್ಬಂಧಿಗಳ ಕುಟುಂಬವೀಗ ಬೀದಿಗೆ ಬೀಳೋ ಆತಂಕ ಎದುರಾಗಿದೆ.

ಸಂಸ್ಥೆಗೆ ಅಗತ್ಯವಿರುವ ಸುಮಾರು 6.50 ಕೋಟಿ ರೂಪಾಯಿ ನೆರವಿನ ಅಗತ್ಯವಿದ್ದು, ಸರಕಾರ ಸಹಕಾರ ಸಂಸ್ಥೆಯ ಸಹಕಾರಕ್ಕೆ ನಿಂತ್ರೆ ಇನ್ನಷ್ಟು ವರ್ಷಗಳ ಕಾಲ ಮಾದರಿ ಸಂಸ್ಥೆಯೊಂದು ಉಳಿಯೋದಕ್ಕೆ ಸಾಧ್ಯ. ಈ ನಿಟ್ಟಿನಲ್ಲಿ ಸರಕಾರ ಸಹಕಾರ ಸಂಸ್ಥೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸೋ ಅಗತ್ಯವಿದೆ.

Leave A Reply

Your email address will not be published.