ಪಕ್ಷದ ಮುಖಂಡರಿಂದ ಕಿರುಕುಳ ಆರೋಪ…! ಕಣದಿಂದ ಹಿಂದೆ ಸರಿದ ತೃತೀಯಲಿಂಗಿ ಅಭ್ಯರ್ಥಿ ಅನನ್ಯಕುಮಾರ್ ಅಲೆಕ್ಸ್….!!

ಕೇರಳ: ಕೇರಳ ವಿಧಾನಸಭೆ ಕಣಕ್ಕಿಳಿದ ಮೊದಲ ತೃತೀಯ ಲಿಂಗಿ ಎಂಬ ಖ್ಯಾತಿಗಳಿಸಿಕೊಂಡಿದ್ದ ತೃತೀಯ ಲಿಂಗಿ ಆರ್ಜೆ ಹಾಗೂ ನಿರೂಪಕಿ ಅನನ್ಯಾಕುಮಾರ್ ಅಲೆಕ್ಸ್ ತಮ್ಮ ಚುನಾವಣಾ ಪ್ರಚಾರ ಮೊಟಕುಗೊಳಿಸಿದ್ದು, ಚುನಾವಣಾ ಕಣದಿಂದ ಹಾಗೂ ಸ್ಪರ್ಧೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.


ಅನನ್ಯಾಕುಮಾರಿ ಕಣಕ್ಕಿಳಿದಿದ್ದ ಡೆಮಾಕ್ರಾಟಿಕ್ ಸೋಷಿಯಲ್ ಜಸ್ಟೀಸ್ ಪಾರ್ಟಿಯ ನಾಯಕರಿಂದ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಚುನಾವಣೆಯಿಂದ ದೂರ ಸರಿಯುವ ನಿರ್ಣಯಕೈಗೊಂಡಿರುವುದಾಗಿ ಹೇಳಿದ್ದಾರೆ. ಚುನಾವಣಾ ಮತದಾನಕ್ಕೆ ಇನ್ನು ಮೂರೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಅನನ್ಯಾ ಪ್ರಚಾರದಿಂದ ದೂರ ಉಳಿದಿದ್ದಾರೆ.

ಅನನ್ಯಾಕುಮಾರಿ ಮಲ್ಲಪುರಂ ಜಿಲ್ಲೆಯ ವೆಂಗಾರಾ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಭರ್ಜರಿ ಪ್ರಚಾರ ಕೈಗೊಂಡಿದ್ದರು. ಆದರೆ ತಮ್ಮನ್ನು ಚುನಾವಣೆಗೆ ಆಯ್ಕೆಮಾಡಿದ ಡೆಮಾಕ್ರಾಟಿಕ್ ಸೋಷಿಯಲ್ ಜಸ್ಟಿಸ್ ಪಕ್ಷದ ನಾಯಕರು ನನ್ನ ಎದುರಾಳಿ ಸ್ಪರ್ಧಿಗಳಾದ, ಯುಡಿಎಫ್ ಒಕ್ಕೂಟದ ಪಿ.ಕೆ.ಕುನ್ಹಾಲಿಕುಟ್ಟಿ ಹಾಗೂ ಸಿಪಿಎಂ ಅಬ್ಯರ್ಥಿ ಪಿ.ಜಿಜಿ ವಿರುದ್ಧ ಕೀಳುಮಟ್ಟದ ಆರೋಪ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅನನ್ಯಾಕುಮಾರ್ ಅಲೆಕ್ಸ್ ಆರೋಪಿಸಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಪರ್ದಾ ಪದ್ಧತಿ ಅನುಸರಿಸುವಂತೆಯೂ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ನಾನು ಸಮಾಜದಲ್ಲಿ ತೃತೀಯಲಿಂಗಿಗಳಿಗೆ ಹಕ್ಕುಗಳನ್ನು ಕೊಡಿಸುವ ಹೋರಾಟದಲ್ಲಿ ಬಲಶಾಲಿಯಾಗಲು ಈ ಚುನಾವಣೆಯನ್ನು  ಆಯ್ಕೆ ಮಾಡಿಕೊಂಡಿದ್ದೆ. ಆದರೆ ನನ್ನನ್ನು ಕಣಕ್ಕಿಳಿಸಿದ ಡಿಎಸ್ ಜೆಪಿ  ನಾಯಕರ ಉದ್ದೇಶವೇ ಬೇರೆ ಇದ್ದಂತಿದೆ.

ನನ್ನನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಬೇರೆ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಆಸೆ ಡಿಎಸ್ಜೆಪಿ ನಾಯಕರಿಗಿದೆ. ಹೀಗಾಗಿ ನಾನು ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ಈಗ ನಾಮಪತ್ರ ಹಿಂಪಡೆಯುವ ಅವಕಾಶವಿಲ್ಲ. ಹೀಗಾಗಿ ಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದೇನೆ ಎಂದು ಅನನ್ಯಕುಮಾರ್ ಅಲೆಕ್ಸ್ ಹೇಳಿದ್ದಾರೆ.\

ನನಗೆ ನನ್ನದೇ ಆದ ನಂಬಿಕೆ,ಸಿದ್ಧಾಂತ ಹಾಗೂ ವಿಚಾರಗಳಿವೆ. ಆದರೆ  ಡಿಎಸ್ಜೆಪಿ ನಾಯಕರು ನನ್ನನ್ನು ವೇಶ್ಯೆಯಂತೆ ಟ್ರೀಟ್ ಮಾಡಿದ್ದಾರೆ. ಹೀಗಾಗಿ ನನ್ನತನವನ್ನು ಬಲಿಕೊಟ್ಟು ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧವಿಲ್ಲದೇ ದೂರು ಉಳಿಯುತ್ತಿದ್ದೇನೆ ಎಂದು ಅನನ್ಯಾಕುಮಾರ ಅಲೆಕ್ಸ್ ಸ್ಪಷ್ಟಪಡಿಸಿದ್ದಾರೆ.  

Comments are closed.