ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಲಾಕ್ ಡೌನ್ ಆದೇಶದಿಂದಾಗಿ ನೌಕರರು ಹಾಗೂ ಗುತ್ತಿಗೆ ಕಾರ್ಮಿಕರು ಉದ್ಯೋಗ ಭದ್ರತೆಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವುದೇ ಕಾರಣಕ್ಕೂ ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ ಕ್ಯಾಪ್ಟನ್ ಮಣಿವಣ್ಣನ್ ಅವರು ಆದೇಶ ಹೊರಡಿಸಿದ್ದಾರೆ.

ಆರೋಗ್ಯ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಾರ್ವಜನಿಕ, ಖಾಸಗಿ ಸಂಸ್ಥೆಗಳ ಉದ್ಯೋಗದಾತರು ಯಾವುದೇ ಕಾರಣಕ್ಕೂ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸುವಂತಿಲ್ಲ ಎಂದು ಕಾರ್ಮಿಕರ ಇಲಾಖೆ ವಿಪತ್ತು ನಿರ್ವಹಣಾ ಕಾಯ್ದೆ 2005 ಸೆಕ್ಷನ್ 69ರ ಅಡಿಯಲ್ಲಿ ಆದೇಶ ಹೊರಡಿಸಿದ್ದು, ಯಾವುದೇ ಕಾರ್ಮಿಕರು ಈ ಅವಧಿಯಲ್ಲಿ ರಜೆ ತೆಗೆದುಕೊಂಡಿದ್ದಲ್ಲಿ ಅವರ ವೇತನವನ್ನು ಕಡಿತ ಮಾಡುವಂತಿಲ್ಲ. ರಜೆಯಲ್ಲಿರುವ ಕೆಲಸಗಾರರನ್ನೂ ಕೂಡ ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸಬೇಕು. ಒಂದೊಮ್ಮೆ ಆದೇಶವನ್ನು ಉಲ್ಲಂಘನೆ ಮಾಡಿದ್ರೆ, ವಿಪತ್ತು ನಿರ್ವಹಣೆ ಕಾಯ್ದೆ 2005ರಡಿ ಕಾರ್ಮಿಕ ಇಲಾಖೆ 48 ಗಂಟೆಗಳ ಒಳಗಾಗಿ ಸಹಾಯವಾಣಿಯನ್ನು ಸ್ಥಾಪಿಸಿ ಕ್ರಮಕೈಗೊಳ್ಳುವುದಾಗಿ ಆದೇಶ ಹೊರಡಿಸಿದೆ. ಇನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಕೂಡ ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದಾರೆ.