ಕ್ರೇಜಿಸ್ಟಾರ್ ಮೆಚ್ಚಿದ ‘ದಿ ಬೆಸ್ಟ್ ಆಕ್ಟರ್’ ?

0

ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿವೆ. ಇನ್ನೂ ಕಿರುಚಿತ್ರಗಳಂತೂ ಜನರ ಗಮನ ಸೆಳೆಯುತ್ತಿದೆ. ಈ ನಿಟ್ಟಿನಲ್ಲಿ ವಿಭಿನ್ನ ಹೆಸರಿನ ಮೂಲಕವೇ ಗಮನ ಸೆಳೆದಿದ್ದ ‘ದಿ ಬೆಸ್ಟ್ ಆಕ್ಟರ್’ ಸಿನಿಮಾ ಇದೀಗ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಸಿನಿಮಾ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನಗೆದ್ದಿದ್ದು, ಪ್ರೇಕ್ಷಕರಿಗೂ ಇಷ್ಟವಾಗಿದೆ.

ಕಲಾವಿದನಾಗೋ ಕನಸು ಕಾಣುವ ಸಾಮಾನ್ಯ ವ್ಯಕ್ತಿಯೋರ್ವನ ಬದುಕಿನ ಚಿತ್ರಣವೇ ದಿ ಬೆಸ್ಟರ್ ಆಕ್ಟರ್. ನಿಜಕ್ಕೂ ಕನ್ನಡ ಸಿನಿಮಾ ರಂಗದ ಮಟ್ಟಿಗೆ ದಿ ಬೆಸ್ಟ್ ಆಕ್ಟರ್ ಒಂದು ವಿಭಿನ್ನ ಪ್ರಯತ್ನ. ಅತ್ತ ಕಿರುಚಿತ್ರವೂ ಅಲ್ಲ, ಇತ್ತ ಕಮರ್ಷಿಯಲ್ ಸಿನಿಮಾವೂ ಅಲ್ಲಾ. 43 ನಿಮಿಷಿಗಳ ದಿ ಬೆಸ್ಟ್ ಆಕ್ಟರ್ ನಲ್ಲಿ ಮನರಂಜನೆಗೇನೂ ಕೊರತೆಯಿಲ್ಲ.

ಕರಾವಳಿಯ ನಿಸರ್ಗದ ಸೌಂದರ್ಯದ ಜೊತೆಗೆ ಹಳ್ಳಿಯ ಸೊಗಡು, ಸಂಸ್ಕೃತಿ, ಆಚಾರ ವಿಚಾರ, ಕಲೆಗೆ ಬೆಲೆ ಕೊಡೋ ಕಲಾವಿದನ ಬಣ್ಣದ ಬದುಕನ್ನು ವಿಭಿನ್ನವಾಗಿ ಕಟ್ಟಿಕೊಡೋ ವಿಭಿನ್ನ ಪ್ರಯತ್ನದಲ್ಲಿ ಗೆಲವುವನ್ನು ಕಂಡಿದ್ದಾರೆ ಚಿತ್ರದ ನಿರ್ದೇಶಕ ನಾಗರಾಜ್ ಸೋಮಯಾಜಿ. ಮಾತ್ರವಲ್ಲ ಕ್ರೆಜಿಸ್ಟಾರ್ ರವಿಚಂದ್ರನ್ ಅವರು ವಿಭಿನ್ನ ಸಿನಿಮಾವನ್ನು ಹಾಡಿಹೊಗಳಿದ್ದಾರೆ.

ಸಿನಿಮಾದಲ್ಲಿ ರಂಗಭೂಮಿಯ ಖ್ಯಾತ ಕಲಾವಿದ ಮಾಧವ ಕಾರ್ಕಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಂಚಾರಿ ಬಳಗದಲ್ಲಿ ಜೊತೆಯಾಗಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ತನ್ನ ಗೆಳೆಯ ಚಿತ್ರ ನಿರ್ದೇಶಕ ನಾಗರಾಜ್ ಸೋಮಯಾಜಿ ಅವರಿಗಾಗಿ ಚಿತ್ರದಲ್ಲಿ ವಿಶೇಷ ಪಾತ್ರಕ್ಕೆ ಜೀವತುಂಬಿದ್ದಾರೆ. ಶಿಶಿರ್ ಕುಮಾರ್, ಮಾಸ್ಟರ್ ಉಲ್ಲಾಸ್ ಸಾಲಿಗ್ರಾಮ ಹಾಗೂ ಪ್ರತಿಮಾ ನಾಯಕ್ ಅವರ ಮನೋಜ್ಞ ಅಭಿನಯ ಚಿತ್ರರಸಿಕರಿಗೆ ಇಷ್ಟವಾಗದೇ ಇರದು.

ಎಟಿಎಂ, ನೂರೊಂದು ನೆನಪು ಚಿತ್ರಗಳಿಗೆ ಕ್ಯಾಮರಾ ವರ್ಕ್ ಮಾಡಿದ್ದ ಎಸ್.ಕೆ.ರಾವ್ ಅವರ ಛಾಯಾಗ್ರಹಣ ಅದ್ಬುತವಾಗಿ ಮೂಡಿಬಂದಿದೆ. ಕರಾವಳಿಯ ಕಾಂಡ್ಲಾ ವನವನ್ನು ಕ್ಯಾಮರಾ ಕಣ್ಣಲ್ಲಿ ವಿಭಿನ್ನವಾಗಿ ಸೆರೆ ಹಿಡಿಯಲಾಗಿದೆ.

ಯಕ್ಷಗಾನ, ಗ್ರಾಮೀಣ ಸೊಗಡಿನ ಜೊತೆಗೆ ಚಿತ್ರದ ಪ್ರತೀ ಶಾಟ್ ಗಳನ್ನೂ ಕೂಡ ವಿಭಿನ್ನವಾಗಿ ತೋರಿಸೋ ಪ್ರಯತ್ನ ಮಾಡಿದ್ದಾರೆ ಎಸ್.ಕೆ.ರಾವ್. 43 ನಿಮಿಷಗಳ ದಿ ಬೆಸ್ಟ್ ಆಕ್ಟರ್ ಎಲ್ಲಿಯೂ ಬೋರ್ ಹೊಡೆಸೋದಿಲ್ಲ. ಕುಂದಾಪುರ, ಸಾಲಿಗ್ರಾಮ, ಪಡುಕೆರೆ, ಶಿರಿಯಾರ, ಕೊಳ್ಕೆಬೈಲಿನ ನಿಸರ್ಗದ ಸೌಂದರ್ಯವನ್ನು ಸಿನಿಮಾದಲ್ಲಿ ಸೆರೆ ಹಿಡಿಯಲಾಗಿದೆ.

ಕೇವಲ 9 ದಿನಗಳ ಅವಧಿಯಲ್ಲಿ ತನ್ನೂರಿನ ನಿಸರ್ಗದ ಮಡಿಲಲ್ಲಿ ಶೂಟಿಂಗ್ ನಡೆಸಿ ವಿಭಿನ್ನ ಸಿನಿಮಾವೊಂದನ್ನು ಸಿದ್ದಪಡಿಸೋ ಮೂಲಕ ನಿರ್ದೇಶಕರಾಗಿ ನಾಗರಾಜ ಸೋಮಯಾಜಿ ನಿಜಕ್ಕೂ ಗೆಲುವು ಕಂಡಿದ್ದಾರೆ.

ಸರ್ವಸ್ವ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡಿರುವ ದಿ ಬೆಸ್ಟ್ ಆಕ್ಟರ್ ಸಿನಿಮಾಕ್ಕೆ ಉದ್ಯಮಿ ದಿನೇಶ್ ವೈದ್ಯ ಅಂಪಾರು ಬಂಡವಾಳ ಹೂಡಿದ್ದಾರೆ.

ಅರ್ಜುನ್ ರಾಮು ಸಂಗೀತ ನೀಡಿದ್ರೆ, ಶ್ರೀಧರ ಬನವಾಸಿ ಅವರ ಕಥೆಯ ಜೊತೆಗೆ ಭಾಸ್ಕರ್ ಬಂಗೇರ ಸಂಭಾಷಣೆ, ಬಿ.ಎಸ್.ಸಂಕೇತ್ ಅವರ ಸಂಕಲನ ಸೇರಿದಂತೆ ಮೂರು ವಿಭಾಗಗಳಲ್ಲಿಯೂ ಚಿತ್ರ ಇಷ್ಟವಾಗುತ್ತದೆ. ಇನ್ನು ಪ್ರೋಡಕ್ಷನ್ ನಲ್ಲಿಯೂ ನಾಗಪ್ರಕಾಶ್ ಕೋಟ ಹಾಗೂ ರಘು ವಡ್ಡರ್ಸೆ ಅವರ ಪ್ರಯತ್ನ ಫಲಕೊಟ್ಟಿದೆ.

ದಿ ಬೆಸ್ಟ್ ಆಕ್ಟರ್ ಸಿನಿಮಾದಲ್ಲಿನ ಕಲಾವಿದರು ಪರದೆ ಮೇಲೆ ಸರ್ವಗುಣ ಸಂಪನ್ನರು. ಮೇಕಪ್ ಕಳಚಿದ ಮೇಲೆ ಎಲ್ಲರಂತೆ ಸಾಮಾನ್ಯರು. ಅನ್ನೋ ಸಂಭಾಷಣೆಯೇ ಚಿತ್ರದ ಕಥೆಯನ್ನು ಬಿಡಿಸಿ ಹೇಳುತ್ತಿದೆ. ದಿ ಬೆಸ್ಟ್ ಆಕ್ಟರ್ ಕಿರುಚಿತ್ರವಲ್ಲ.

ಬದಲಾಗಿ 43 ನಿಮಿಷಗಳ ಕಿರು ಸಿನಿಮಾ. ಕಲಾವಿದನಾಗಿ ಸಾಧನೆ ಮಾಡೋ ಪ್ರತಿಯೊಬ್ಬ ವ್ಯಕ್ತಿಗೂ ಓರ್ವ ಗಾಡ್ ಫಾದರ್ ಇರ್ತಾರೆ. ಇಲ್ಲಾ ಇನ್ನೊಬ್ಬ ಕಲಾವಿದನನ್ನ ಕಂಡು ತಾನೂ ಸಾಧನೆಯ ಶಿಖರವೇರುತ್ತಾನೆ. ಇನ್ನು ‘ದಿ ಬೆಸ್ಟ್ ಆಕ್ಟರ್’ ಸಿನಿಮಾದಲ್ಲಿನ ‘ಬೆಸ್ಟ್ ಆಕ್ಟರ್’ ಯಾರೂ ಅನ್ನೋದನ್ನು ತಿಳಿದುಕೊಳ್ಳಬೇಕಾದ್ರೆ ಕಡ್ಡಾಯವಾಗಿ ನೀವು ಸಿನಿಮಾ ನೋಡಲೇ ಬೇಕು.

ದಿ ಬೆಸ್ಟ್ ಆ್ಯಕ್ಟರ್ ನೋಡುವುದಕ್ಕೆ ತಡಯಾಕೆ. ಕೆಳಗಿನ ಲಿಂಕ್ ಕ್ಲಿಕ್ ಮಾಡಿ 43 ನಿಮಿಷಗಳ ಸಿನಿಮಾ ನೋಡಿ ರಿಲ್ಯಾಕ್ಸ್ ಆಗಿ…

Leave A Reply

Your email address will not be published.