ಇನ್ನಷ್ಟು ಕಠಿಣವಾಗುತ್ತಾ ಲಾಕ್ ಡೌನ್ ಆದೇಶ : ಪ್ರಧಾನಿ ಮೋದಿ ಭಾಷಣದ ಹಿಂದಿನ ಗುಟ್ಟೇನು ?

0

ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶದಲ್ಲಿ ಹರಡುತ್ತಿದ್ದಂತೆಯೇ ದೇಶದಲ್ಲಿ ಲಾಕ್ ಡೌನ್ ಆದೇಶ ಜಾರಿ ಮಾಡಲಾಗಿತ್ತು. ಆದ್ರೀಗ 21 ದಿನಗಳ ಲಾಕ್ ಡೌನ್ ಆದೇಶ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮೋದಿ ಭಾಷಣ ಸಾಕಷ್ಟು ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ದೇಶದಲ್ಲಿ ಲಾಕ್ ಡೌನ್ ಆದೇಶ ಇನ್ನಷ್ಟು ಕಠಿಣವಾಗೋ ಸಾಧ್ಯತೆಯಿದೆ.

ದೇಶದಲ್ಲಿ ಕೊರೊನಾ ಸೋಂಕಿಗೆ ವೃದ್ದನೋರ್ವ ಸಾವನ್ನಪ್ಪುತ್ತಿದ್ದಂತೆಯೇ ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಆದೇಶ ಜಾರಿ ಮಾಡಿದ್ದರು. ಲಾಕ್ ಡೌನ್ ಆದೇಶ ಜಾರಿ ಮಾಡುತ್ತಲೇ ದೇಶವೇ ಸ್ಥಬ್ದವಾಗಿತ್ತು. ಆದರೆ ಕೊರೊನಾ ಸೋಂಕಿತರ ಸಂಖ್ಯೆ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಸಾಗಿತ್ತು. ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಆದೇಶ ಪಾಲನೆಯಾಗದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೇ ಬೇಸರ ವ್ಯಕ್ತಪಡಿಸಿದ್ದರು.

ಅಲ್ಲದೇ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿ ಲಾಕ್ ಡೌನ್ ಆದೇಶವನ್ನು ಪರಿಣಾಮಕಾರಿಯಾಗಿ ನಡೆಸುವಂತೆಯೂ ಸೂಚನೆ ನೀಡಿದ್ದರು. ಈ ನಡುವಲ್ಲೇ ಎಪ್ರಿಲ್ 14ರಂದು 21 ದಿನಗಳ ಲಾಕ್ ಡೌನ್ ಆದೇಶ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಮೋ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಇದೀಗ ದೇಶದಾದ್ಯಂತ ಕೂತೂಹಲ ಮೂಡಿಸಿದೆ. ಲಾಕ್ ಡೌನ್ ಆದೇಶ ಮುಕ್ತಾಯವಾಗೋ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನ ಮಂತ್ರಿ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ಆದೇಶವನ್ನು ಮುಂದುವರಿಸೋದಕ್ಕೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಎಪ್ರಿಲ್ 30ರ ವರೆಗೂ ದೇಶದಾದ್ಯಂತ ಲಾಕ್ ಡೌನ್ ಆದೇಶ ಮುಂದುವರಿಯೋದು ಖಚಿತ. ಆದರೆ ಲಾಕ್ ಡೌನ್ ಆದೇಶ ಇನ್ನಷ್ಟು ಕಠಿಣವಾಗೋದು ನಿಶ್ಚಯವಾಗಿದೆ.

ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ಲಾಕ್ ಡೌನ್ ಆದೇಶ ಘೋಷಣೆ ಮಾಡುವಾಗ ದೇಶದಾದ್ಯಂತ 434 ಮಂದಿ ಕೊರೊನಾ ಸೋಂಕಿತರಿದ್ದು, ಇಡೀ ದೇಶದಲ್ಲಿ 9 ಮಂದಿ ಸಾವನ್ನಪ್ಪಿದ್ದರು. ಆದರೆ ಲಾಕ್ ಡೌನ್ ಆದೇಶದ ನಡುವಲ್ಲೇ ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದುವರೆಗೆ ದೇಶದಲ್ಲಿ 9,352 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ರೆ, 324 ಮಂದಿಯನ್ನು ಡೆಡ್ಲಿ ಕೊರೊನಾ ಬಲಿ ಪಡೆದಿದೆ. ಈ ನಡುವಲ್ಲೇ 980 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಆದರೆ ದೆಹಲಿ, ಮಹಾರಾಷ್ಟ್ರ, ಕೇರಳ ರಾಜ್ಯಗಳು ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿವೆ.

ಭಾರತದಲ್ಲಿ ಲಾಕ್ ಡೌನ್ ಆದೇಶ ಜಾರಿಯಾದ ದಿನದಂದು ಅಮೇರಿಕಾದಲ್ಲಿ 42,164 ಮಂದಿ ಕೊರೊನಾ ಸೋಂಕಿತರಿದ್ದು 471 ಮಂದಿ ಸಾವನ್ನಪ್ಪಿದ್ದರು. ಆದ್ರೆ ಇಂದು ಅಮೇರಿಕಾದಲ್ಲಿ 5,76,693 ಅಧಿಕ ಮಂದಿ ಸೋಂಕಿತರಿದ್ದು, 23,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣವಾಗಿರೋದು ಅಮೇರಿಕಾದಲ್ಲಿ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗದೇ ಇರೋದು. ಹೀಗಾಗಿ ಕೇಂದ್ರ ಸರಕಾರ ಲಾಕ್ ಡೌನ್ ಆದೇಶವನ್ನು ಪರಿಣಾಮಕಾರಿಯಾಗಿ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ.

ದೇಶದಲ್ಲಿ ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೂಡ ಲಾಕ್ ಡೌನ್ ಆದೇಶವನ್ನು ಇನ್ನಷ್ಟು ಬಿಗಿಗೊಳಿಸಲು ಚಿಂತನೆ ನಡೆಸಿದೆ. ಕೊರೊನಾ ಹೆಚ್ಚುತ್ತಿರೋ ನಗರಗಳ ಮೇಲೆ ಹದ್ದಿನಕಣ್ಣಿಡಲು ಬೇಕಾದ ಎಲ್ಲಾ ಸಿದ್ದತೆಗಳನ್ನೂ ಮಾಡಿಕೊಂಡಿದೆ. ಎಪ್ರಿಲ್ 30ರ ವರೆಗೆ ಲಾಕ್ ಡೌನ್ ಜೊತೆಗೆ ಹಲವು ಕಡೆಗಳಲ್ಲಿ ಸೀಲ್ ಡೌನ್ ಆದೇಶ ಜಾರಿಯಾಗೋ ಸಾಧ್ಯತೆಯಿದೆ.

ಆದರೆ ಅಗತ್ಯವಸ್ತುಗಳ ಪೂರೈಕೆ ಹಾಗೂ ಆರೋಗ್ಯ ಸೇವೆಗಳಿಗೆ ಸಮಸ್ಯೆಯಾಗದಂತ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶದಲ್ಲಿ ಒಂದಿಷ್ಟು ಮಾರ್ಪಾಡುಗಳನ್ನು ಮಾಡುವುದು ಖಚಿತವೆನ್ನಲಾಗುತ್ತಿದೆ. ಕೃಷಿಕರಿಗೆ ಹಾಗೂ ಆಹಾರ ಉತ್ಪಾದಕಾ ಕ್ಷೇತ್ರಗಳಿಗೆ ಲಾಕ್ ಡೌನ್ ಆದೇಶದಿಂದ ವಿನಾಯಿತಿ ಸಿಗುವ ಸಾಧ್ಯತೆಯಿದೆ. ಮಾತ್ರವಲ್ಲ ಮೋದಿ ಲಾಕ್ ಡೌನ್ ವಿಸ್ತರಣೆ ಮಾಡಿದ್ರೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸೋ ಸಾಧ್ಯತೆಯಿದ್ದು, ದೇಶದಾದ್ಯಂತ ಹಣದ ಹರಿವಿಗೆ ಪೂರಕವಾಗುವ ಯೋಜನೆಗಳನ್ನು ಘೋಷಣೆಯಾಗಲಿದೆ ಎನ್ನಲಾಗುತ್ತಿದೆ.

Leave A Reply

Your email address will not be published.