DBS ಜೊತೆಗೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ವಿಲೀನ : ಕೇಂದ್ರದ ಒಪ್ಪಿಗೆ

ನವದೆಹಲಿ : ಕೊನೆಗೂ ಲಕ್ಷ್ಮೀ ವಿವಾಸ ಬ್ಯಾಂಕ್ ಗ್ರಾಹಕರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ತಮಿಳುನಾಡು ಮೂಲದ ಖಾಸಗಿ ವಲಯದ ಲಕ್ಷ್ಮಿವಿಲಾಸ್ ಬ್ಯಾಂಕ್ ಅನ್ನು, ಸಿಂಗಾಪುರ ಮೂಲದ ಡಿಬಿಎಸ್‌ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಎಲ್ ವಿಬಿ ಬ್ಯಾಂಕ್ ಅನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್ ಜತೆ ವಿಲೀನ ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸುಮಾರು 20 ಲಕ್ಷ ಠೇವಣಿದಾರರು ಮತ್ತು ನಾಲ್ಕು ಸಾವಿರ ಉದ್ಯೋಗಿಗಳಿಗೆ ಭದ್ರತೆ ಸಿಗಲಿದೆ ಎಂದು ಪ್ರಕಾಶ್ ಜಾವಡೇಕರ್ ಅವರು ಹೇಳಿದ್ದಾರೆ.

ಒಪ್ಪಂದದ ಪ್ರಕಾರ, ಡಿಬಿಎಸ್‌ಗೆ 563 ಶಾಖೆಗಳು, 974 ಎಟಿಎಂಗಳು ಮತ್ತು ಚಿಲ್ಲರೆ ಹೊಣೆಗಾರಿಕೆಗಳಲ್ಲಿ 1.6 ಬಿಲಿಯನ್ ಫ್ರ್ಯಾಂಚೈಸ್ ದೊರೆತಿದೆ. 94 ವರ್ಷದಷ್ಟು ಹಳೆಯದಾದ ಎಲ್‌ವಿಎಸ್‌ ಬ್ಯಾಂಕ್ನಲ್ಲಿನ ಠೇವಣಿಗಳು ಡಿಬಿಎಸ್‌ ಇಂಡಿಯಾದ ಜೊತೆಗೆ ವಿಲೀನಗೊಳ್ಳಲಿದೆ.

ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಲಕ್ಷ್ಮಿ ವಿಲಾಸ್ ಬ್ಯಾಂಕಿನ ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ತಡೆಯಲು ಆರ್‌ಬಿಐ ನವೆಂಬರ್ 17ರಂದು 30 ದಿನಗಳ ನಿಷೇಧ ಹೇರಿತ್ತು. ಪರಿಣಾಮ ಬ್ಯಾಂಕಿನ ಠೇವಣಿದಾರರ 25,000 ವಿತ್‌ಡ್ರಾ ಮಿತಿಯನ್ನು ಹೇರಲಾಗಿತ್ತು. ಆದಾಗ್ಯೂ ಗ್ರಾಹಕರ ಠೇವಣಿ ಸುರಕ್ಷಿತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

Comments are closed.