ಕೋಟ : ಆಹಾರ ಹುಡುಕಿಕೊಂಡು ಬಂದ ಚಿರತೆಯೊಂದು ಮನೆಯ ಕೋಣೆಯೊಳಗೆ ಬಂಧಿಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ನೈಲಾಡಿಯಲ್ಲಿ ನಡೆದಿದೆ.

ರಾತ್ರಿಯ ಹೊತ್ತಲ್ಲಿ ಚಿರತೆಯೊಂದು ನಾಯಿಯನ್ನು ಹಿಡಿಯಲು ಮುಂದಾಗಿದೆ. ಈ ವೇಳೆಯಲ್ಲಿ ನಾಯಿ ಮನೆಯ ಕೋಣೆಯೊಳಗೆ ನುಗ್ಗಿದೆ. ಕೂಡಲೇ ಚಿರತೆ ಕೂಡ ಕೋಣೆಯೊಳಗೆ ಓಡಿತ್ತು. ವಿಷಯ ಮನೆಯವರಿಗೆ ತಿಳಿಯುತ್ತಿದ್ದಂತೆಯೆ ಕೋಣೆಯ ಬಾಗಿಲು ಬಂದ್ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ್, ಸಿಬ್ಬಂದಿ ಗಳಾದ ಸಂತೋಷ್ ಜೋಗಿ, ರವೀಂದ್ರ, ವಿಠಲನಾಯ್ಕ, ರವಿ, ಲಕ್ಷ್ನಣ, ಶಿವು, ಸಂದೀಪ ಶೆಟ್ಟಿ ಅವರು ಸ್ಥಳೀಯರ ಸಹಕಾರದೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.
ಅಲ್ಲದೇ ಸಾಯಬ್ರಕಟ್ಟೆ ಆಸ್ಪತ್ರೆ ಪಶುವೈದ್ಯಾಧಿಕಾರಿಗಳು ತಲಾಸಣೆ ನಡೆಸಿ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.