ತುಂಬೆ ಹೂವು.. ಸಾಮಾನ್ಯವಾಗಿ ಶಿವರಾತ್ರಿ ಪರ್ವ ಕಾಲದಲ್ಲಿ ಮಾತ್ರ ಈ ಹೂವು ನಮಗೆ ನೆನಪಾಗುತ್ತೆ. ಶಿವನಿಗೆ ಅತ್ಯಂತ ಪ್ರಿಯವಾಗಿರೋ ತುಂಬೆ ಹೂವನ್ನು ದೇವರ ಮುಡಿಗಿಟ್ಟು ಭಕ್ತಿಯಿಂದ ಬೇಡಿದ್ರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಅನ್ನೋ ನಂಬಿಕೆ ನಮ್ಮಲ್ಲಿದೆ.

ಆದರೆ ಈ ತುಂಬೆಯ ಹೂವು ದೇವರ ಮುಡಿಗೇರುವುದು ಮಾತ್ರವಲ್ಲ, ನಮ್ಮ ಆರೋಗ್ಯವನ್ನು ವೃದ್ದಿಸಲು ಸಹಕಾರಿಯಾಗಿದೆ.

ತುಂಬೆಯ ಹೂವಿನಲ್ಲಿ ಔಷಧೀಯ ಗುಣವಿದ್ದು, ತುಂಬೆಯ ಗಿಡವನ್ನು ನಾನಾ ರೀತಿಯ ಔಷಧವಾಗಿಯೂ ಬಳಕೆ ಮಾಡಲಾಗುತ್ತಿದೆ. ಮಾತ್ರವಲ್ಲ ನಮ್ಮಲ್ಲಿ ಕಾಣಿಸಿಕೊಳ್ಳುವ ಅದೆಷ್ಟೋ ರೋಗಗಳಿಗೂ ತುಂಬೆಯ ಹೂವು ಹಾಗೂ ಗಿಡ ರಾಮಬಾಣವಾಗಿದೆ.

ಆಧುನಿಕ ಯುಗದಲ್ಲಿ, ಇಂದಿನ ಜಂಜಾಟದ ಬದುಕಿನಲ್ಲಿ ಮಾನವ ಎಲ್ಲವನ್ನೂ ಮರೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮರೆವಿನ ಕಾಯಿಲೆಯೂ ಹೆಚ್ಚುತ್ತಿದೆ. ಆದರೆ ಮಕ್ಕಳು ಹಾಗೂ ನಮ್ಮಲ್ಲಿನ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ತುಂಬೆಯ ಹೂವು ಹೆಚ್ಚು ಪೂರಕ. ತುಂಬೆ ಗಿಡದ ಬಿಳಿಯ ಹೂವನ್ನು ಜೇನು ತುಪ್ಪದಲ್ಲಿ ನೆನೆಸಿ ತಿನ್ನುವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ವೃದ್ದಿಸುತ್ತದೆ.

ತುಂಬೆ ಗಿಡದ ರಸ ಹಾಗೂ ಕರಿಮೆಣಸು ನಮ್ಮ ದೇಹದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಮುಖ್ಯವಾಗಿ ನೀವೇನಾದ್ರೂ ವಿಷಮ ಜ್ವರದಿಂದ ಬಳಲುತ್ತಿದ್ರೆ ತುಂಬೆ ಗಿಡದ ರಸದ ಜೊತೆಗೆ ಕರಿಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ವಿಷಮ ಜ್ವರ ಕಡಿಮೆಯಾಗುತ್ತದೆ.

ದೇಹದಲ್ಲಿ ಊತ ಕಾಣಿಸಿಕೊಂಡರೂ ಕೂಡ ತುಂಬೆಯ ಗಿಡ ಉತ್ತಮ ಔಷಧಿ. ಪ್ರಮುಖವಾಗಿ ತುಂಬೆ ಗಿಡದ ಕಾಂಡವನ್ನು ಬಿಸಿಯ ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು. ನಂತರ ತುಂಬೆ ಗಿಡದ ಕಾಂಡದಿಂದ ಊತದ ಮೇಲೆ ಶಾಖ ಕೊಟ್ಟರೆ ಊತ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆಯ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ತುಂಬೆಯ ಗಿಡದ ಕಷಾಯ ಅತ್ಯುತ್ತಮ ಔಷಧಿ. ತುಂಬೆ ಗಿಡ ಕಷಾಯಕ್ಕೆ ಸೈಂಧವ ಉಪ್ಪನ್ನು ಸೇರಿಸಿ ದಿನಕ್ಕೆ 2 ಬಾರಿ ಸೇವನೆ ಮಾಡುವುದರಿಂದ ಜೀರ್ಣ ಕ್ರೀಯೆಯು ಹೆಚ್ಚುತ್ತದೆ.

ತಲೆನೋವು, ತಲೆಭಾರ ಮತ್ತು ಮೂಗು ಕಟ್ಟಿದಲ್ಲಿ ತುಂಬೆ ಗಿಡದ ಖಾಂಡವನ್ನು ನೀರಿನಲ್ಲಿ ಕುದಿಸಿ ಅದರ ಹಬೆಯನ್ನು ತೆಗೆದುಕೊಂಡರೆ ತಲೆನೋವು, ತಲೆ ಭಾರ ಕಡಿಮೆಯಾಗುತ್ತದೆ.

