ಮಂಗಳೂರು : ತುಳುವರ ಪಾಲಿನ ಆರಾಧ್ಯ ದೈವವೆನಿಸಿಕೊಂಡಿರುವ ಸ್ವಾಮಿ ಕೊರಗಜ್ಜ ಹಾಗೂ ಗೂಳಿಗಜ್ಜನ ಕ್ಷೇತ್ರದ ಕಾಣಿಕೆ ಹುಂಡಿಗೆ ಕಿಡಿಗೇಡಿಗಳು ಕಾಂಡೋಮ್ ಹಾಕಿ ವಿಕೃತಿ ಮೆರೆದ ಘಟನೆ ಮಂಗಳೂರಲ್ಲಿ ನಡೆದಿದೆ.

ನಗರದ ಹೊರವಲಯದ ಉಳ್ಳಾಲದ ಬಸ್ ನಿಲ್ದಾಣದ ಬಳಿಯಲ್ಲಿ ಸ್ವಾಮಿ ಕೊರಗಜ್ಜ ಹಾಗೂ ಗೂಳಿಗಜ್ಜನ ಪುಣ್ಯ ಕ್ಷೇತ್ರದಲ್ಲಿರುವ ಕಾಣಿಕೆಯ ಹುಂಡಿಯಲ್ಲಿ ಕಾಂಡೋಮ್ ಹಾಗೂ ಅವಹೇಳನಕಾರಿ ಬರಹಗಳ ಪತ್ರವನ್ನು ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.
ಕೊರಗಜ್ಜನ ಕ್ಷೇತ್ರದಲ್ಲಿ ಸಂಕ್ರಮಣದ ದಿನದಂದು ಕಾಣಿಕೆ ಡಬ್ಬದಲ್ಲಿರುವ ಹಣವನ್ನು ತೆಗೆಯಲಾಗುತ್ತದೆ. ಅಂತೆಯೇ ಇಂದೂ ಕೂಡ ಕಾಣಿಗೆ ಹುಂಡಿಯನ್ನು ಓಪನ್ ಮಾಡಿದ ಸಂದರ್ಭದಲ್ಲಿ ಕಿಡಿಗೇಡಿಗಳ ದುಷ್ಕೃತ್ಯ ಬಯಲಾಗಿದೆ.

ಕೇವಲ ಕಾಂಡೋಮ್ ಹಾಕಿರುವುದು ಮಾತ್ರವಲ್ಲದೇ ವಿವಿಧ ಬಿಜೆಪಿ ಮುಖಂಡರ ಭಾವಚಿತ್ರ ವಿರುವ ಪೋಸ್ಟರ್ ನ್ನು ಕಾಣಿಕೆ ಹುಂಡಿ ಯೊಳಗೆ ಹಾಕಲಾಗಿದ್ದು, ಪೋಸ್ಟರ್ ನಲ್ಲಿ ಬಿಜೆಪಿ ಮುಖಂಡರ ಮುಖಗಳನ್ನು ವಿರೂಪಗೊಳಿಸಲಾಗಿದ್ದು, ಅವಹೇಳನಕಾರಿ ಬರಹಗಳನ್ನು ಪತ್ರದಲ್ಲಿ ಬರೆಯಲಾಗಿದೆ.

ಕೊರಗಜ್ಜನ ಕ್ಷೇತ್ರದಲ್ಲಿ ಕಿಡಿಗೇಡಿಗಳ ದುಷ್ಕೃತ್ಯ ಬಯಲಾಗುತ್ತಿದ್ದಂತೆಯೇ ಭಕ್ತರು ಕಿಡಿಗೇಡಿಗಳ ವಿರುದ್ದ ಕೊರಗಜ್ಜ ಹಾಗೂ ಗುಳಿಗಜ್ಜ ನಿಗೆ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರು ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಕಳೆದೊಂದು ಹತ್ತು ದಿನಗಳ ಹಿಂದೆಯಷ್ಟೇ ಕೊಟ್ಟಾರ ಹಾಗೂ ಅತ್ತಾವರದ ದೈವ ಕ್ಷೇತ್ರಗಳಲ್ಲಿನ ಕಾಣಿಕೆ ಡಬ್ಬದಲ್ಲಿಯೂ ಇಂತಹ ದೇ ಬರಹಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಉಳ್ಳಾಲ ಠಾಣೆಯ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.