ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ದಿವಾಕರ್ ಹಾಗೂ ಉಪ ಮೇಯರ್ ಆಗಿ ಜಾನಕಿ ಯಾನೆ ವೇದಾವತಿ ಆಯ್ಕೆಯಾಗಿದ್ದಾರೆ.

ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಿವಾಕರ್ ಪರ 46 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೇಶವ ಮರೋಳಿ ಪರವಾಗಿ 15 ಮತಗಳು ಚಲಾವಣೆಯಾಯಿತು. ಇನ್ನು ಎಸ್ ಡಿಪಿಐಯ ಇಬ್ಬರು ಸದಸ್ಯರು ತಟಸ್ಥರಾಗಿದ್ದರು. ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯ ಜಾನಕಿ ಅವರ ಪರವಾಗಿ 46 ಮತಗಳು ಬಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಝೀನತ್ ಸಂಶುದ್ದೀನ್ ಪರವಾಗಿ 15 ಮತಗಳು ಚಲಾವಣೆಯಾದವು. ಈ ಮೂಲಕ ಮಂಗಳೂರು ಕಂಟೋನ್ಮೆಂಟ್ ವಾರ್ಡಿನ ದಿವಾಕರ್ ಪಾಂಡೇಶ್ವರ ನೂತನ ಮೇಯರ್ ಹಾಗೂ ಕುಳಾಯಿ ವಾರ್ಡಿನ ವೇದಾವತಿ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಹಾಲ್ ನಲ್ಲಿ ಮೈಸೂರು ಪ್ರಾದೇಶಿಕ ಆಯುಕ್ತರಾದ ವಿ. ಯಶವಂತ ಚುನವಾಣಾ ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ವಿ. ರೂಪೇಶ್, ಪಾಲಿಕೆ ಕಮಿಷನರ್ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.