ಬೆಂಗಳೂರು : ಮಂಗಳೂರಿನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರಿಟ್ಟಿರುವುದು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಇದೀಗ ತುಳುನಾಡ ವೀರ ಪುರಷರಾಗಿರುವ ಕೋಟಿ – ಚೆನ್ನಯ್ಯರ ಹೆಸರಿಡುವಂತೆ ಕೂಗು ಕೇಳಿಬಂದಿದೆ. ಅಲ್ಲದೇ ಮೂಡಬಿದ್ರೆಯ ಬಿಜೆಪಿಯ ಶಾಸಕ ಉಮಾನಾಥ ಕೋಟ್ಯಾನ್ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಲವು ವರ್ಷಗಳಿಂದಲೂ ಕೋಟಿ ಚೆನ್ನಯ್ಯರ ಹೆಸರಿಡುವಂತೆ ಒತ್ತಾಯ ಕೇಳಿಬರುತ್ತಿದೆ. ಆದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅದಾನಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರಿಡಲಾಗಿದೆ. ಏರ್‌ಪೋರ್ಟ್ ಅದಾನಿ ಹೆಸರಿಟ್ಟಿದ್ದಕ್ಕೆ ಕರಾವಳಿ ಭಾಗದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕೋಟಿ ಚೆನ್ನಯ್ಯರು ತುಳುನಾಡಿನ ವೀರ ಪುರುಷರು ಹೀಗಾಗಿ ಅವರ ಹೆಸರನ್ನೇ ಇಡಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ ಎಂದಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈಗಾಗಲೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ಕೇಂದ್ರ ಸರಕಾರ ಗುತ್ತಿಗೆಗೆ ನೀಡಿದೆ. ಆದರೂ ವಿಮಾನ ನಿಲ್ದಾಣಕ್ಕೆ ಹೆಸರು ಬದಲಾಯಿಸುವ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಹೆಸರು ಬದಲಾಯಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ಹಲವು ವರ್ಷಗಳಿಂದಲೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರಿಡುವಂತೆ ಕರಾವಳಿ ಭಾಗದ ಜನರು ಒತ್ತಾಯಿಸುತ್ತಿದ್ದಾರೆ. ಇದೀಗ ವಿಧಾನಸೌದದದಲ್ಲಿಯೂ ಆಗ್ರಹ ಕೇಳಿಬಂದಿದೆ. ಹೀಗಾಗಿ ರಾಜ್ಯ ಸರಕಾರ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರಿಡಲಾಗುತ್ತೆ ಅನ್ನೋ ಭರವಸೆ ಮೂಡಿದೆ.