Nice road:ನೈಸ್ ವಿರುದ್ಧ ಹೇಳಿಕೆ….! ಮಾಜಿ ಪ್ರಧಾನಿ ದೇವೆಗೌಡರಿಗೆ 2 ಕೋಟಿ ರೂಪಾಯಿ ದಂಡ…!!

ಬರೋಬ್ಬರಿ 10 ವರ್ಷಗಳ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ್ದ ಹೇಳಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ಸಂಕಷ್ಟಕ್ಕೊಳಗಾಗಿದ್ದು, ನೈಸ್ ವಿರುದ್ಧ ಹೇಳಿಕೆ ನೀಡದಂತೆ ನಿರ್ಬಂಧಿಸಿರುವ ನ್ಯಾಯಾಲಯ ಮಾಜಿ ಪ್ರಧಾನಿ ಗೌಡರಿಗೆ 2 ಕೋಟಿ ರೂಪಾಯಿ ದಂಡ ವಿಧಿಸಿದೆ.

ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟ್ರಪ್ರೈಸಸ್ ವಿರುದ್ಧ 2011 ರಲ್ಲಿ ಮಾಜಿ ಪ್ರಧಾನಿ ದೇವೆಗೌಡರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು.  ದೇವೆಗೌಡರು ನೀಡಿದ ಹೇಳಿಕೆಯಿಂದ ನೈಸ್ ಘನತೆಗೆ ಚ್ಯುತಿ ಉಂಟಾಗಿದೆ ಎಂದು ಆರೋಪಿಸಿದ್ದ ನೈಸ್ ಮಾನನಷ್ಟ ಮೊಕದ್ದಮೆಯೊಂದಿಗೆ ನ್ಯಾಯಾಲಯದ ಮೆಟ್ಟಿಲೇರಿತ್ತು.

ದೇವೆಗೌಡರ ಹೇಳಿಕೆಯಿಂದ ನೈಸ್ ಗೌರವ ಹಾಗೂ ಘನತೆಗೆ ಚ್ಯುತಿ ಬಂದಿದೆ ಎಂದು ಆರೋಪಿಸಿದ್ದ ನೈಸ್ 10 ಕೋಟಿ ರೂಪಾಯಿ ಪರಿಹಾರ ಕೋರಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇನ್ಮುಂದೆ ನೈಸ್ ವಿರುದ್ಧ ಹೇಳಿಕೆ ನೀಡದಂತೆ ದೇವೆಗೌಡರ ಮೇಲೆ ನಿರ್ಬಂಧ ಹೇರಿದ್ದು, ಜೊತೆಗೆ 2 ಕೋಟಿ ರೂಪಾಯಿ ದಂಡ ವಿಧಿಸಿದೆ.

ನೈಸ್ ವಿರುದ್ಧ ಮಾಡಿದ ಆರೋಪಗಳನ್ನು ಸಮರ್ಥಿಸಿಕೊಳ್ಳಲು ದೇವೆಗೌಡರು ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂದಿರುವ ನ್ಯಾಯಾಧೀಶ ಮಲ್ಲನ ಗೌಡರು, ಇಂಥ ಹೇಳಿಕೆಯಿಂದ ಮಹತ್ವದ ಯೋಜನೆ ಜಾರಿಗೆ ವಿಳಂಬವಾಗಬಾರದು. ಹೀಗಾಗಿ ಇಂಥ ಹೇಳಿಕೆ ನೀಡಬಾರದು ಎಂದು ಆದೇಶಿಸಿದ್ದಾರೆ.

ಹಲವಾರು ಭಾರಿ ನೈಸ್ ವಿರುದ್ಧ ಹೋರಾಟಗಳನ್ನು ನಡೆಸಿರುವ ಮಾಜಿ ಪ್ರಧಾನಿ ದೇವೆಗೌಡರು, ನೈಸ್ ಸಂಸ್ಥೆ ಅಗತ್ಯಕ್ಕಿಂತ ಹೆಚ್ಚಿನ ಭೂಮಿ ವಶಪಡಿಸಿಕೊಂಡು ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಪ್ರಧಾನಿಗಳಿಗೆ ಪತ್ರ ಬರೆದಿದ್ದರು.  

Comments are closed.