ಬೆಂಗಳೂರು : ಹೊಸ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಾಳೆಯಿಂದ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ.
ಇಂದು ಬೆಳಗ್ಗೆಯಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ನೈಟ್ ಕರ್ಪ್ಯೂ ಆದೇಶ ಹೊರಡಿಸಿದ್ದರು. ಆದರೆ ಸಂಜೆಯ ಹೊತ್ತಿಗೆ ರಾಜ್ಯ ಸರಕಾರ ತನ್ನ ಆದೇಶದಲ್ಲಿ ಬದಲಾವಣೆಯನ್ನು ಮಾಡಿದ್ದು, ನೈಟ್ ಕರ್ಪ್ಯೂ ಮಾರ್ಗಸೂಚಿಯನ್ನು ಹೊರಡಿಸಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕಂಪೆನಿಗಳು, ಕೈಗಾರಿಕೆ ಹಾಗೂ ಕಚೇರಿಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ರಾತ್ರಿಯ ವೇಳೆಯಲ್ಲಿ ಶೇ.50ರಷ್ಟು ಕಾರ್ಮಿಕರ ಮೂಲಕ ಕಾರ್ಯನಿರ್ವಹಿಸ ಬಹುದಾಗಿದೆ. ಇನ್ನು ಸಿಬ್ಬಂಧಿ ಅಥವಾ ಕಾರ್ಮಿಕರು ಸಂಚರಿಸುವ ವೇಳೆಯಲ್ಲಿ ಕಡ್ಡಾಯವಾಗಿ ಸಂಸ್ಥೆಯ ಗುರುತಿನ ಚೀಟಿಯನ್ನು ಹೊಂದಿರಲೇ ಬೇಕು. ರಾತ್ರಿಯ ವೇಳೆಯಲ್ಲಿ ಬಸ್ ಸಂಚಾರ, ರೈಲು ಹಾಗೂ ವಿಮಾನಯಾನ ಸೇವೆಗಳು ಎಂದಿನಂತೆಯೇ ಇರಲಿವೆ. ಅಲ್ಲದೇ ಪ್ರಯಾಣಿಕರ ಅನುಕೂಲತೆಗೆ ತಕ್ಕಂತೆ ರಿಕ್ಷಾ ಹಾಗೂ ಟ್ಯಾಕ್ಸಿ ಸೇವೆಯೂ ಲಭ್ಯವಾಗಲಿದೆ. ಆದರೆ ಪ್ರಯಾಣಿಕರು ಪ್ರಯಾಣದ ಟಿಕೆಟ್ ನ್ನು ಕಡ್ಡಾಯವಾಗಿ ಹೊಂದಿರಬೇಕು. ಡಿಸೆಂಬರ್ 24ರ ಮಧ್ಯ ರಾತ್ರಿ ಕ್ರಿಸ್ಮಸ್ ಮಾಸ್ ಆಚರಣೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ.
ರಾಜ್ಯ ಸರಕಾರ ಬೆಳಗ್ಗೆ ಇಂದಿನಿಂದಲೇ ನೈಟ್ ಕರ್ಪ್ಯೂ ಜಾರಿ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ವ್ಯಾಪಕ ವಿರೋಧ ವ್ಯಕ್ತ ವಾಗುತ್ತಿದ್ದಂತೆಯೇ ಸರಕಾರ ತನ್ನ ಆದೇಶವನ್ನು ಹಿಂಪಡೆದು ನಾಳೆಯಿಂದ ನೈಟ್ ಕರ್ಪ್ಯೂ ಜಾರಿ ಮಾಡಿದೆ. ಸರಕಾರ ಕೊರೊನಾ ವೈರಸ್ ಸೋಂಕಿನ ವಿಚಾರದಲ್ಲಿ ಪದೇ ಪದೇ ಆದೇಶಗಳನ್ನು ಬದಲಾಯಿಸುತ್ತಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಾತ್ರಿಯ ವೇಳೆಯಲ್ಲಿ ಎಲ್ಲಾ ಸೇವೆಗಳು ಲಭ್ಯವಾಗುತ್ತಿರುವಾಗ ನೈಟ್ ಕರ್ಪ್ಯೂ ಯಾಕೆ ಅಂತಾನೂ ಜನರು ಪ್ರಶ್ನಿಸುತ್ತಿದ್ದಾರೆ.

