ಕಣ್ಣಿಗೆ ಕಾಣದ ವೈರಸ್ ವೊಂದು ವಿಶ್ವವನ್ನೇ ತನ್ನ ಕಪಿಮುಷ್ಠಿಗೆ ತೆಗೆದುಕೊಂಡು, ಮರಣಮೃದಂಗ ಬಾರಿಸಿರುವ ಹೊತ್ತಿನಲ್ಲಿ ಉತ್ತರ ಕೊರಿಯಾ ಮಾತ್ರ ನಿಶ್ಚಿಂತೆಯ ಬದುಕಿನ ಜೊತೆ ರಾಜಕೀಯ ಮೇಲಾಟಗಳಲ್ಲಿ ತೊಡಗಿಕೊಂಡಿದೆ. ಇದಕ್ಕೆ ಕಾರಣ ಕೊರೋನಾ ವೈರಸ್ ಉತ್ತರ ಕೊರಿಯಾಕ್ಕೇ ಕಾಲೇ ಇಟ್ಟಿಲ್ವಂತೆ.

ಇದು ಅಚ್ಚರಿ ಎನ್ನಿಸಿದರೂ ನಿಜವಾದ ವಿಚಾರ. ಯಾಕೆಂದರೆ ಈ ವಿಚಾರವನ್ನು ಸ್ವತಃ ಉತ್ತರ ಕೊರಿಯಾದ ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಡಿಸೆಂಬರ್ 2019 ರ ವೇಳೆಗೆ ಚೀನಾದ ಮೂಲಕ ವಿಶ್ವಕ್ಕೆ ಹರಡಿದ ಈ ಸೋಂಕು ಉತ್ತರ ಕೊರಿಯಾಕ್ಕೆ ತಲುಪಿಲ್ಲವಂತೆ.

ಆದ್ಯಾಗ್ಯೂ ಉತ್ತರ ಕೊರಿಯಾದಲ್ಲಿ ಕೊರೋನಾ ನಿಯಂತ್ರಣ ಹಾಗೂ ಕೊರೋನಾ ಸೋಂಕು ಹರಡದಂತೆ ತಡೆಯುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅಷ್ಟೇ ಯಾಕೆ ಸೋಷಿಯಲ್ ಡಿಸ್ಟನ್ಸ್ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಲಾಕ್ ಡೌನ್ ಕೂಡ ಜಾರಿಯಾಗಿತ್ತು.

ಕೇವಲ ಉತ್ತರ ಕೊರಿಯಾ ಮಾತ್ರವಲ್ಲದೇ, 10 ಅದೃಷ್ಟಶಾಲಿ ರಾಷ್ಟ್ರಗಳು ಈ ಸೋಂಕಿನ ಬಾಧೆಯಿಂದ ತಪ್ಪಿಸಿಕೊಂಡು ನಿರಾಳವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಕಿರಿಬಾಟಿ,ಮಾರ್ಷಲ್ ದ್ವೀಪಗಳು,ಮೈಕ್ರೋನೇಷ್ಯಾ,ನೌರು,ಪಲಾವ್,ಸಮೋವಾ,ಸೋಲೋಮನ್ ದ್ವೀಪಗಳು,ಟೊಂಗ,ತುರ್ಕ್ ಮೆನಿಸ್ತಾನ್,ಟುವಲು,ವಾನ್ವಾಟು ರಾಷ್ಟ್ರಗಳು ಕೂಡ ಉತ್ತರ ಕೊರಿಯಾದಂತೆ ಕೊರೋನಾ ಮುಕ್ತವಾಗಿದೆ .
ಇದನ್ನು ಹೊರತು ಪಡಿಸಿದ್ರೆ ಚೀನಾದಿಂದ ಆರಂಭಿಸಿ ವ್ಯಾಟಿಕನ್ ಸಿಟಿಯವರೆಗೆ ಕೊರೋನಾ ತನ್ನ ಕಬಂಧಬಾಹು ಚಾಚಿದ್ದು, ಇದುವರೆಗೂ ವಿಶ್ವದಲ್ಲಿ ಕೊರೋನಾಕ್ಕೆ 5 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಸೋಂಕಿತರ ಸಂಖ್ಯೆ ಕೋಟಿಗಳನ್ನು ದಾಟಿದೆ.

ಜುಲೈ 26 ರಂದು ದಕ್ಷಿಣಾ ಕೊರಿಯಾದಿಂದ ಉತ್ತರ ಕೊರಿಯಾಕ್ಕೆ ನುಸುಳಿ ಬಂದ ಓರ್ವ ವ್ಯಕ್ತಿಗೆ ಕೊರೋನಾ ಸೋಂಕಿ ತಗುಲಿದೆ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ರೌದ್ರಾವತಾರ ತಾಳಿದ್ದ ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಶಂಕಿತ ವ್ಯಕ್ತಿ ಕಂಡುಬಂದ ಕೈಸೋಂಗ್ ನಗರಕ್ಕೆ ಸಂಪೂರ್ಣ ಲಾಕ್ ಡೌನ್ ಹೇರಿದ್ದರು. ಜೊತೆಗೆ ಕೊರೋನಾ ಸಂಭವನೀಉ ಸ್ಪೋಟ್ ತಡೆಯಲು ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದರು. ಅಲ್ಲದೇ ಆ ವ್ಯಕ್ತಿಯನ್ನು ಬಂಧಿಸಿ ಆರೋಗ್ಯ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.
ಆತನ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಆತನ ವೈದ್ಯಕೀಯ ವರದಿಯಲ್ಲಿ ಕೊರೋನಾ ನೆಗೆಟಿವ್ ಬಂದಿದ್ದರಿಂದ ಒಂದು ಪ್ರಕರಣದ ಸಾಧ್ಯತೆಯಿಂದಲೂ ಉತ್ತರ ಕೊರಿಯಾ ಬಚಾವ್ ಆಗಿದೆ. ಈ ರಾಷ್ಟ್ರಗಳು ಕೊರೋನಾದಂತಹ ಸಾಮೂಹಿಕ ಸಾಂಕ್ರಾಮಿಕ ಸೋಂಕಿನಿಂದ ಬಚಾವ್ ಆಗೋದಿಕ್ಕೆ ದೇಶದಭೌಗೋಳಿಕ ವ್ಯಾಪ್ತಿ, ಜನಸಾಂದ್ರತೆ, ಹವಾಮಾನ,ಇತರ ರಾಷ್ಟ್ರಗಳ ಜತೆಗಿನ ಸಂಪರ್ಕವೂ ಮುಖ್ಯವಾಗುತ್ತದೆ. ಆದರೆ ಉತ್ತರ ಕೊರಿಯಾದಂತಹ ರಾಷ್ಟ್ರಗಳ ದ್ವೀಪಗಳಂತೆ ಬದುಕೋದರಿಂದ ಸಾಂಕ್ರಾಮಿಕ ಸೋಂಕುಗಳ ಹರಡುವಿಕೆಯನ್ನು ಯಶಸ್ವಿಯಾಗಿ ತಡೆಗಟ್ಟಲು ಸಾಧ್ಯವಿದೆ. ಇಂತಹ ಕ್ರಮಗಳಿಗಾಗಿಯೇ ಉತ್ತರ ಕೊರಿಯಾ ಕೊರೋನಾಕ್ಕೆ ನೋ ಎಂಟ್ರಿ ಹೇರಿ ಸುರಕ್ಷಿತ ರಾಷ್ಟ್ರ ಎನ್ನಿಸಿಕೊಂಡಿದೆ.