ಮೈಸೂರು : ರಾಜ್ಯದಲ್ಲಿ ಬಿಜೆಪಿ ಸುಲಭಕ್ಕೆ ಅಧಿಕಾರವನ್ನು ಬಿಟ್ಟುಕೊಡುವುದಿಲ್ಲ. ಮುಂದಿನ ಎರಡೂವರೆ ವರ್ಷ ಸಂಪೂರ್ಣ ಅಧಿಕಾರ ನಡೆಸಲಿದೆ. ಆದರೆ ಉತ್ತಮ ಆಡಳಿತ ನಡೆಸಲಿ ಅನ್ನೋದೆ ನಮ್ಮ ಉದ್ದೇಶ. ನಮ್ಮ ಸಹಕಾರವೂ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿ ಇದ್ದಾರೆ ಅನ್ನೋದನ್ನೇ ಮರೆತೇ ಬಿಟ್ಟಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕವನ್ನ ಲೆಕ್ಕಕ್ಕೆ ಇಟ್ಟಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಮುಖ್ಯಮಂತ್ರಿ ಇದ್ದಾರೆ ಅನ್ನೋದನ್ನ ಮರೆತೆಬಿಟ್ಟಿದ್ದಾರೆ. ಇಂತಹ ಸಂದರ್ಭಗಳಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ರಾಜ್ಯವನ್ನ ಇನ್ನಷ್ಟು ಸಂಕಷ್ಟಕ್ಕೆ ದೂಡಲಿದೆ.
ನೀವು ಮಾಡಿರುವ ನಿಗಮ ಹಾಗೂ ಪ್ರಾಧಿಕಾರದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ ಏನಿದೆ. ಕೆಲವು ನಿಗಮದಲ್ಲಿ 50 ಲಕ್ಷವು ಹಣವಿಲ್ಲ. ಆದ್ರೂ ಅವುಗಳ ಅಭಿವೃದ್ಧಿಗೆ ಕೋಟಿ ಕೋಟಿ ಬೇಕಾಗಿದೆ. ಇದರಿಂದ ಪಕ್ಷ ಸಂಘಟನೆ ಆಗುತ್ತೆ ಕಾರ್ಯಕರ್ತರಿಗೆ ಸಮಾಧಾನ ಆಗುತ್ತೆ ಅಂದುಕೊಂಡಿದ್ದೀರಾ. ಆದ್ರೆ ಅದು ಸಾಧ್ಯವೇ ಇಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಇನ್ನು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರುದ್ದ ಅಸಮಾಧಾನವನ್ನು ಹೊರಹಾಕಿದ್ದಾರೆ. ನಮ್ಮ ಕುಟುಂಬಕ್ಕೆ ಅದೊಂದು ಶಾಪ ಇದೆ. ನಾವು ಯಾರನ್ನ ಬೆಳೆಸುತ್ತೇವೋ ಅಂತವರಿಂದಲೇ ಮೋಸಗೊಳ್ಳುತ್ತಿದ್ದೇವೆ. ಆ ಶಾಪವನ್ನ ಹೇಗೆ ವಿಮೋಚನೆ ಮಾಡಬೇಕೋ ಎನ್ನುವುದು ನಮಗಿನ್ನು ತಿಳಿಯುತ್ತಿಲ್ಲ.
ಒಂದು ರಿಸರ್ಚ್ ಮಾಡಿ ಆ ಬಳಿಕ ಶಾಪ ವಿಮೋಚನೆ ಮಾಡಿಕೊಳ್ಳುತ್ತೇವೆ. ರಾಜಕೀಯವಾಗಿ ಅನಾಥರಾದಾಗ ಯಾವ ಹಕ್ಕಿಗಳು ಸೇರಿಸದ ಸಂದರ್ಭದಲ್ಲಿ ನಾವು ಗೂಡು ನೀಡಿದ್ದೆವು. ವಿಶ್ವನಾಥ್ ಗೆ ದೇವೇಗೌಡ್ರು ಬೇಕಂತೆ. ಆದ್ರೆ ಕುಮಾರಸ್ವಾಮಿ ಕಂಡ್ರೆ ಆಗಲ್ಲವಂತೆ. ಈ ಸಮಸ್ಯೆ ನಮ್ಮ ಕುಟುಂಬಕ್ಕೆ ಬಹಳ ದಿನಗಳಿಂದಲೂ ಇದೆ. ಬೆಳೆಸಿದವರಿಂದಲೇ ನಮಗೆ ಮೋಸ ಆಗುತ್ತೆ ಎಂದು ಹಳ್ಳಿ ಹಕ್ಕಿ ಹೆಚ್. ವಿಶ್ವನಾಥ್ ಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.