ಮುಂಬೈ: ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ಸೋಂಕಿಗೆ ಪ್ಲಾಸ್ಮಾ ಥೆರಪಿಯೊಂದೇ ರಾಮಬಾಣವೆಂದು ಹೇಳಲಾಗುತ್ತಿತ್ತು. ಜನರು ಕೂಡ ಪ್ಲಾಸ್ಮಾ ಚಿಕಿತ್ಸೆಯ ಮೇಲೆಯೇ ಸಾಕಷ್ಟು ಭರವಸೆಯನ್ನು ಇಟ್ಟುಕೊಂಡಿದ್ದರು. ಆದ್ರೀಗ ಪ್ಲಾಸ್ಮಾ ಚಿಕಿತ್ಸೆ ಪಡೆದ ವ್ಯಕ್ತಿಯೋರ್ವರು ಮಹಾರಾಷ್ಟ್ರದಲ್ಲಿ ಮೃತಪಟ್ಟಿದ್ದಾರೆ.

ಏ.20ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾದ 53 ವರ್ಷದ ವ್ಯಕ್ತಿಗೆ ಏ.25 ರಿಂದ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿತ್ತು. ಆರಂಭದಲ್ಲಿ ಆರೋಗ್ಯ ಸುಧಾರಿಸಿದಂತೆ ಕಾಣಿಸಿದರೂ ನಂತರ ತೀವ್ರ ಉಸಿರಾಟದ ತೊಂದರೆಯಿಂದಾಗಿ ರೋಗಿ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಮೃತ ರೋಗಿಗೆ ಕೊರೋನಾದಿಂದ ಗುಣಮುಖರಾದ ವ್ಯಕ್ತಿಯ 200 ಎಂಎಲ್ ಪ್ಲಾಸ್ಮಾವನ್ನು ಏ.25 ರಂದು ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಪ್ಲಾಸ್ಮಾ ಚಿಕಿತ್ಸೆ ಪಡೆದಿದ್ದ ದೆಹಲಿ ಮೂಲದ ಕೊರೊನಾ ಸೊಂಕಿತರೊಬ್ಬರು ಗುಣಮುಖರಾಗಿದ್ದರು. ಇದರ ಬೆನ್ನಲ್ಲೇ ದೇಶದಲ್ಲಿ ಪ್ಲಾಸ್ಮಾ ಚಿಕಿತ್ಸೆಯಿಂದ ಮೊದಲ ಸಾವಿನ ಸುದ್ದಿಯೂ ಬಂದಿದೆ. ಕೊರೋನಾಗೆ ಪ್ಲಾಸ್ಮಾ ಚಿಕಿತ್ಸೆ ಅಂಗೀಕೃತವಲ್ಲ, ಅದನ್ನು ಸರಿಯಾದ ವಿಧಾನದಲ್ಲಿ ನಡೆಸದಿದ್ದರೆ ಸಾವೂ ಸಂಭವಿಸಬಹುದು ಎಂದು ಕೇಂದ್ರ ಸರ್ಕಾರ ಈ ಹಿಂದೆ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಈ ಘಟನೆ ನಡೆದಿದೆ.