ಲಖ್ನೋ: ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ದುಬಾರಿ ಶುಲ್ಕವನ್ನು ಮನ್ನಾ ಮಾಡುವಂತೆ ಮನವಿ ಮಾಡಿದ ಮಹಿಳೆಯರ ಬಳಿ ಬಿಜೆಪಿ ಶಾಸಕರೊಬ್ಬರು ಅಸಭ್ಯವಾಗಿ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಮಕ್ಕಳನ್ನು ಹೆರೋದು ನೀವು ಖರ್ಚು ಸರ್ಕಾರ ಮಾಡಬೇಕೇ? ಎಂದು ಪ್ರಶ್ನಿಸಿರುವ ಬಿಜೆಪಿ ಶಾಸಕ ರಮೇಶ್ ದಿವಾಕರ್ ಹೇಳಿಕೆ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಔರೈಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ವೇಳೆ ಮಹಿಳೆಯರ ನಿಯೋಗವೊಂದು ಶಾಸಕ ರಮೇಶ್ ದಿವಾಕರ್ ಅವರನ್ನು ವೇದಿಕೆ ಬಳಿ ಭೇಟಿ ಮಾಡಿತ್ತು. ಕೊರೋನಾದಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಇದಕ್ಕಾಗಿ ಸರ್ಕಾರ ಖಾಸಗಿ ಶಾಲೆಗಳ ದುಬಾರಿ ಶುಲ್ಕ ಮನ್ನಾ ಮಾಡುವಂತೆ ಮನವಿ ಮಾಡಿದೆ. ಮಹಿಳೆಯರ ಮನವಿಗೆ ಒರಟಾಗಿ ಉತ್ತರಿಸಿದ ಶಾಸಕ ರಮೇಶ್ ದಿವಾಕರ್ ಬಚ್ಚಾ ಪೈದಾ ಕರೇ ಆಫ್ ಓರ್ ಖರ್ಚಾ ಉಟಾಯೇ ಸರ್ಕಾರ್? ಎಂದು ಪ್ರಶ್ನಿಸಿದ್ದಾರೆ. ಶಾಸಕರ ಈ ಉದ್ಧಟತನದ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಬಿಜೆಪಿ ಶಾಸಕ ರಮೇಶ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಇದು ಬಿಜೆಪಿಯ ಮಹಿಳಾ ವಿರೋಧಿ ನೀತಿಯನ್ನು ಬಿಂಬಿಸುತ್ತಿದೆ. ಸಹಾಯ ಕೋರಿ ಬಂದ ಮಹಿಳೆಯರಿಗೆ ಬಿಜೆಪಿ ಶಾಸಕರು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದೆ.

ಶಾಸಕ ರಮೇಶ್ ಮಹಿಳೆಯರ ಕಷ್ಟಕ್ಕೆ ಸ್ಪಂದಿಸುವ ಬದಲು ನೀವು ಮಕ್ಕಳನ್ನು ಹೆರುತ್ತೀರಿ. ಮತ್ತು ಅವರ ಖರ್ಚನ್ನು ಸರ್ಕಾರ ಭರಿಸಲು ಎಂದು ಬಯಸುತ್ತೀರಿ. ಇದರ ಬದಲು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಿ ಎಂದು ಬಿಟ್ಟಿ ಸಲಹೆ ನೀಡಿದ್ದು, ಈ ಹೇಳಿಕೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಅಲ್ಲದೇ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ರಮೇಶ್ ಕ್ಷಮೆಯಾಚಿಸಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.