ಮಂಡ್ಯ: ಶತಾಯಗತಾಯ ಆರ್.ಆರ್. ನಗರ ಉಪಚುನಾವಣೆ ಗೆಲ್ಲಲೇ ಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ದೇವರ ಮೊರೆ ಹೋಗಿದ್ದಾರೆ. ಮಂಡ್ಯದ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ ಕುಸುಮಾ ಉರುಳುಸೇವೆ ಸಲ್ಲಿಸಿ ತಮ್ಮ ಗೆಲುವಿಗೆ ಪ್ರಾರ್ಥಿಸಿದ್ದಾರೆ.

ವಿಜಯದಶಮಿಯಂದು ಆದಿಚುಂಚನಗಿರಿ ಗೆ ತೆರಳಿದ ಕುಸುಮಾ ಕ್ಷೇತ್ರಾಧಿಪತಿ ಕಾಲಭೈರವನಿಗೆ ಪೂಜೆ ಸಲ್ಲಿಸಿ ಬಳಿಕ ದೇಗುಲದಲ್ಲಿ ಉರುಳುಸೇವೆ ನಡೆಸಿದರು. ದೇಶದ ಒಳಿತಿಗಾಗಿ, ರಾಜ್ಯದ ಒಳಿತಿಗಾಗಿ, ಲೋಕಕಲ್ಯಾಣಕ್ಕಾಗಿ ಈ ಸೇವೆ ಕೈಗೊಂಡಿದ್ದೇನೆ. ದೇಶದಲ್ಲಿ ಕೊರೋನಾ ಹಾವಳಿ ನಿವಾರಣೆ ಯಾಗಲಿ. ದುಷ್ಟರ ನಿಗ್ರಹ ಮಾಡು ಶಿಷ್ಟರ ರಕ್ಷಣೆ ಮಾಡು ಎಂದು ದೇವರನ್ನು ಪ್ರಾರ್ಥಿಸಿದ್ದೇನೆ ಎಂದರು.

ಉರುಳುಸೇವೆಯ ಬಳಿಕ ಮಾತನಾಡಿದ ಕುಸುಮಾ ಹನುಮಂತರಾಯಪ್ಪ, ರಾಜರಾಜೇಶ್ವರಿ ನಗರದ ಒಳಿತಿಗಾಗಿ ಈ ಉರುಳುಸೇವೆ ಮಾಡಿದ್ದೇನೆ. ಆರ್.ಆರ್. ನಗರ ಕ್ಷೇತ್ರದಲ್ಲಿ ಗೆಲುವು ಗಾಗಿ ಶತಪ್ರಯತ್ನ ನಡೆಸಿರುವ ಕುಸುಮಾ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಚಾರ ನಡೆಸಿದ್ದು, ಇಂದು ಮಾಜಿ ಸಿಎಂ ಸಿದ್ಧರಾಮಯ್ಯ ಕೂಡ ಪ್ರಚಾರ ನಡೆಸಿದ್ದಾರೆ.

ಇನ್ನು ಕುಸುಮಾ ಉರುಳುಸೇವೆ ಪೋಟೋಗಳು ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದು ಹಲವರು ಕುಸುಮಾ ಪರ ನಿಂತಿದ್ದರೇ ಕೆಲವರು ಇದೆಲ್ಲ ಚುನಾವಣೆ ಗಿಮಿಕ್ ಅಂತ ಕುಸುಮಾ ಕಾಲೆಳೆದಿದ್ದಾರೆ.