ಬೆಂಗಳೂರು : ರಾಜರಾಜೇಶ್ವರಿ ನಗರ ಉಪಚುನಾವಣೆಯ ಹೊತ್ತಲ್ಲೇ ಮುನಿರತ್ನಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. 2018ರ ವಿಧಾನ ಸಭೆ ಚುನಾವಣೆಯಲ್ಲಿ ಮುನಿರತ್ನ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ರಾಜ್ಯ ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆ ಸಂದರ್ಭ ಆರ್.ಆರ್. ನಗರ ಕ್ಷೇತ್ರದ ಅಭ್ಯರ್ಥಿ ಮುನಿರತ್ನ ಅವರು ಅಕ್ರಮ ಎಸಗಿ ಗೆಲುವು ಸಾಧಿಸಿದ್ದಾರೆ, ಹೀಗಾಗಿ ಅರ್ಜಿ ಇತ್ಯರ್ಥ ಆಗುವವರೆಗೆ ಕ್ಷೇತ್ರದ ಉಪ ಚುನಾವಣೆ ನಡೆಸ ಕೂಡದು ಎಂದು ಮೇಲ್ಮನವಿಯಲ್ಲಿ ಕೋರಲಾಗಿತ್ತು.

ಚುನಾವಣೆ ವೇಳೆ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮತದಾರರ ನಕಲಿ ಗುರುತಿನ ಚೀಟಿ ಪತ್ತೆಯಾಗಿದ್ದವು, ಈ ಅಕ್ರಮದಲ್ಲಿ ಮುನಿರತ್ನ ಭಾಗಿಯಾದ ಆರೋಪವಿದೆ, ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಹತ್ತಿರದ ಪ್ರತಿಸ್ಫರ್ಧಿಯಾಗಿದ್ದ ನನ್ನನ್ನು ಜಯಶಾಲಿ ಎಂದು ಘೋಷಿಸಬೇಕು ಎಂದು ಕೋರಿ ಮುನಿರಾಜುಗೌಡ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿರುವ ನೆಪವೊಡ್ಡಿ ಬಿಜೆಪಿ ಟಿಕೆಟ್ ಕೈತಪ್ಪುತ್ತೆ ಅನ್ನೋ ಭೀತಿ ಮುನಿರತ್ನ ಅವರನ್ನು ಕಾಡುತ್ತಿತ್ತು. ಇದೀಗ ನ್ಯಾಯಾಲಯದ ತೀರ್ಪು ಮುನಿರತ್ನ ಅವರಿಗೆ ರಿಲೀಫ್ ಕೊಟ್ಟಿದೆ.